ಶಿವಮೊಗ್ಗ [ಜ.03]: ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಮರಣ ಮೃದಂಗ ಭಾರಿಸಿದ್ದ ಮಹಾಮಾರಿ ಮಂಗನ ಕಾಯಿಲೆ ಮತ್ತೆ ಕಾಣಿಸಿಕೊಂಡಿದೆ. 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಿರೇಮಕ್ಕಿ ಗ್ರಾಮದ ವ್ಯಕ್ತಿಯೋರ್ವರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. 

ಶಿವಮೊಗ್ಗ ಜಿಲ್ಲಾ ಆರೋಗ್ಯಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದ್ದು,  ಹೀರೆಮಕ್ಕಿ ಗ್ರಾಮದ ನರಸಿಂಹ ಎನ್ನುವ ವ್ಯಕ್ತಿಯಲ್ಲಿ  ಕೆಎಫ್ ಡಿ ವೈರಸ್ ಪತ್ತೆಯಾಗಿದ್ದು ಸೂಕ್ತ  ಚಿಕಿತ್ಸೆ ಬಳಿಕ ರೋಗ ಪೀಡಿತ ಚೇತರಿಕೊಳ್ಳುತ್ತಿದ್ದಾನೆ ಎಂದಿದ್ದಾರೆ. 

ಕರ್ನಲ್ ಮೆಗ್ಗಾನ್ ಮತ್ತು ಮಂಗನ ಕಾಯಿಲೆ..ಒಂದು ನೆನಪು...

ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಅತ್ಯಧಿಕ ಸಂಖ್ಯೆಯಲ್ಲಿ ಜನ ಸಾವಿಗೀಡಾಗಿದ್ದರು.  ಆದರೆ ಈ ಬಾರಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮುಂಚಿತವಾಗಿಯೇ ಲಸಿಕೆಗಳನ್ನು ಹಾಕಲಾಗಿದೆ. ಆದರೂ ಪ್ರಕರಣ ಪತ್ತೆಯಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಮಂಗನ ಕಾಯಿಲೆ ಲಕ್ಷಣ 
ವಿಪರೀತ ಜ್ವರ, ಕಣ್ಣು ಕೆಂಪಾಗುವುದು, ವಾಂತಿ, ತಲೆನೊವು, ಮೂಗು, ಬಾಯಿ, ಕರುಳು ಮತ್ತು ಗುದದ್ವಾರದಲ್ಲಿ ರಕ್ತಸ್ರಾವ ಕೀಲುನೊವು ಹಾಗೂ ಮಾಂಸ ಖಂಡಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಜ್ವರ ಉಲ್ಬಣಿಸಿದರೆ ಹತೋಟಿ
ಸುಲಭವಲ್ಲ. ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಕೊನೆಗೆ ರೋಗಿ ಮೃತಪಡುತ್ತಾನೆ. ಆರಂಭದಲ್ಲಿ ಚಿಕಿತ್ಸೆ ನೀಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಸ್ವಲ್ಪ ತಡವಾದರೂ ರೋಗಿ ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಸ್ಥಿತಿಗೆ ತಲುಪುತ್ತಾನೆ. ಬಹು
ಅಂಗಾಂಗ ವೈಪಲ್ಯ ಕಾಣಿಸುತ್ತದೆ. ಪ್ರಜ್ಞೆ ಕಳೆದುಕೊಂಡು ಕೊನೆಗೆ ಸಾವನ್ನಪ್ಪುತ್ತಾನೆ.

ಇಡೀ ಊರಿಗೇ ಮಂಗನ ಕಾಯಿಲೆ, ಒಂದು ಹೃದಯ ವಿದ್ರಾವಕ ಪತ್ರ...

ಮೊದಲು ಕಾಣಿಸಿಕೊಂಡಿದ್ದು: ಈ ರೋಗ ಮೊದಲು ಕಾಣಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ. 1957ರಲ್ಲಿ. ಕಾಣಿಸಿಕೊಂಡ ಚಿಕಿತ್ಸೆಯಿಲ್ಲದ ಈ ಕಾಯಿಲೆ ವೈದ್ಯರನ್ನು ದಂಗು ಬಡಿಸಿತ್ತು. ಇಲ್ಲಿ ಮೊದಲು ಕಾಣಿಸಿದ್ದರಿಂದ ಇದಕ್ಕೆ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌(ಕೆಎಫ್‌ಡಿ) ಎಂದು ಹೆಸರು ಬಂತು.