ಹೂವಿನಹಡಗಲಿ(ಫೆ.17): ಐತಿಹಾಸಿಕ ಮತ್ತು ಪೌರಾಣಿಕವಾಗಿ ಪರಮ ಸಿದ್ದವೆನಿಸಿದ ಪಶ್ಚಿಮವಾಹಿನಿ, ದಕ್ಷಿಣ ಕಾಶಿಯೆಂದು ಕರೆಯುವ ತುಂಗಭದ್ರ ನದಿ ತೀರದ ಪವಿತ್ರ ಪುಣ್ಯ ಭೂಮಿ ಕುರುವತ್ತಿ ಬಸವೇಶ್ವರ ಮತ್ತು ಶ್ರೀಮಲ್ಲಿಕಾರ್ಜುನ ದೇವರ ಜಾತ್ರೆಗೆ ಫೆ. 18ರಂದು ಜಾತ್ರೆಗೆ ಚಾಲನೆ ಸಿಗಲಿದೆ.

ಈಗಾಗಲೇ ಜಿಲ್ಲಾಡಳಿತದ ನಿರ್ದೇಶನದಂತೆ ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿಯಿಂದ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಿದ್ದತೆ ಜೋರಾಗಿಯೇ ನಡೆಯುತ್ತಿದೆ. ಜಾತ್ರೆಯ ಶುದ್ಧ ಕುಡಿವ ನೀರು ಹಾಗೂ ವಿವಿಧ ಕಡೆಗಳಲ್ಲಿ 10 ಸ್ಯಾಂಡ್‌ ಪೋಸ್ಟ್‌, 7 ಮಿನಿ ವಾಟರ್‌ ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ, 5 ಕಡೆಗಳಲ್ಲಿ ಜಾನುವಾರುಗಳಿಗೆ ಕುಡಿವ ನೀರಿನ ತೊಟ್ಟಿ ನಿರ್ಮಾಣ ಮತ್ತು ಗಣೇಶ ದೇವಸ್ಥಾನದ ಬದಿ ನೀರಿನ ವ್ಯವಸ್ಥೆ ಮಾಡಲು ಕೊಳವೆ ಬಾವಿ ಕೊರೆಸಲಾಗುತ್ತಿದೆ. 4 ಕಡೆಗಳಲ್ಲಿ 80ಕ್ಕೂ ಹೆಚ್ಚು ತಾತ್ಕಾಲಿಕವಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಾಪಂ ಇಒ ಯು.ಎಚ್‌. ಸೋಮಶೇಖರ ಮಾಹಿತಿ ನೀಡಿದ್ದಾರೆ.

ಈ ಬಾರಿ ನದಿ ತೀರದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಸ್ನಾನ ಮಾಡಿದ ನಂತರದಲ್ಲಿ ಬಟ್ಟೆಬದಲಾವಣೆಗೆ ಶಾಮಿಯಾನ ಹಾಗೂ ಶೆಡ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಜಾತ್ರೆಯಲ್ಲಿ ಪರಿಷೆ ಸೇರುವ ಜಾಗದಲ್ಲಿ ಜಂಗಲ್‌ ಕಟ್ಟಿಂಗ್‌ ಹಾಗೂ ಬೈಪಾಸ್‌ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕುರುವತ್ತಿಯ ಗಣೇಶ ದೇವಸ್ಥಾನದ ಎದುರಿಗೆ ತಾತ್ಕಾಲಿಕ ಬಸ್‌ ನಿಲ್ದಾಣ, ಎದುರುಗಡೆ ಖಾಸಗಿ ವಾಹನಗಳ ನಿಲುಗಡೆಗೆ ಸ್ಥಳದ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರೆಯ ಎರಡು ಕಡೆಗಳಲ್ಲಿ ಪೊಲೀಸ್‌ ಠಾಣೆ ನಿರ್ಮಾಣ, ಪಶು ಆಸ್ಪತ್ರೆ ಹಾಗೂ ಸಂಚಾರಿ ಪಶು ಆಸ್ಪತ್ರೆ, ಜನಾರೋಗ್ಯ ಕಾಪಾಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ತೇರಿನ ಬೀದಿಯನ್ನು ದುರಸ್ತಿ ಮಾಡಲಾಗಿದೆ.

ಧಾರ್ಮಿಕ ಕಾರ್ಯಕ್ರಮ:

ಫೆ. 18ರಂದು ಶ್ರೀಬಸವೇಶ್ವರ ಮತ್ತು ಶ್ರೀಮಲ್ಲಿಕಾರ್ಜುನ ದೇವರಿಗೆ ಕಂಕಣಧಾರಣ ಸೇವೆ ನಂತರ ಉತ್ಸವ ಮೂರ್ತಿಯು ಪ್ರಭಾವಳಿಯಲ್ಲಿ ತುಂಗಭದ್ರ ನದಿಗೆ ತೆರಳಿ ನಂತರ ಸುಕ್ಷೇತ್ರದಲ್ಲಿರುವ ಸಿಂಹಾಸನ ಕಟ್ಟೆಯವರೆಗೂ ಸಲಕ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಫೆ. 21ರಂದು ಮಹಾ ಶಿವರಾತ್ರಿಯ ದಿನ ಶ್ರೀಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀಬಸವೇಶ್ವರ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನದ ಇಒ ಎಂ.ಎಚ್‌. ಪ್ರಕಾಶ ರಾವ್‌ ತಿಳಿಸಿದ್ದಾರೆ.

ಫೆ. 23ರಂದು ಮಹಾ ಶಿವರಾತ್ರಿ ಅಮವಾಸೆ ದಿನ ಸಂಜೆ 4.30ಕ್ಕೆ ಶ್ರೀಬಸವೇಶ್ವರ ಸ್ವಾಮಿ ಸಂಭ್ರಮದ ರಥೋತ್ಸವ ನಡೆಯಲಿದೆ. ಶತಮಾನಗಳ ಕಾಲ ಇತಿಹಾಸ ಹೊಂದಿರುವ ಕುರುವತ್ತಿ ಬಸವೇಶ್ವರ ಜಾತ್ರೆಯು ಗ್ರಾಮೀಣ ಸೊಗಡಿನ ಪರಂಪರೆಯು ನಡೆದು ಬಂದಿದೆ. ಉತ್ತರ ಕರ್ನಾಟಕ ಭಾಗದ ಅತಿ ದೊಡ್ಡ ಜಾತ್ರೆಗೆ ಹುಬ್ಬಳ್ಳಿ, ದಾವಣಗೆರೆ, ಹರಿಹರ, ಗದಗ, ರಾಣಿಬೆನ್ನೂರು, ಧಾರವಾಡ, ಹಾವೇರಿ, ಹೂವಿನಹಡಗಲಿ, ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸುತ್ತಾರೆ.

ಫೆ. 24ರಂದು ಸಂಜೆ 5 ಗಂಟೆಗೆ ಓಕುಳಿ ಉತ್ಸವವು ಸಿಂಹಾಸನ ಕಟ್ಟೆಯ ಮುಂದೆ ನಡೆಯಲಿದೆ. ಫೆ. 25ರಂದು ಉದಯ ಉತ್ಸವ ಮೂರ್ತಿಯು ಸಿಂಹಾಸನ ಕಟ್ಟೆಯಿಂದ ದೇವಸ್ಥಾನಕ್ಕೆ ಆಗಮಿಸಿದ ನಂತರ ಮಹಾ ಮಂಗಳಾರತಿ ನಡೆಯಲಿದೆ.

ತುಂಗಭದ್ರೆಯ ತಟದಲ್ಲಿರುವ ಕುರುವತ್ತಿ ಪುಣ್ಯ ಕ್ಷೇತ್ರವಾಗಿದ್ದು, ಈ ಸುಕ್ಷೇತ್ರದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಐತಿಹಾಸಿಕ ಹಿನ್ನೆಲೆವುಳ್ಳ ಪುರಾತನ ಕಾಲದ ದೇವಸ್ಥಾನಗಳಲ್ಲಿ 6 ಅಡಿ ಎತ್ತರದ ನಂದಿ ಮತ್ತು 4 ಅಡಿ ಎತ್ತರದ ಶಿವಲಿಂಗು ಇದೆ.

ಕುರುವತ್ತಿಗೆ ಪೌರಾಣಿಕ ಹಿನ್ನೆಲೆ ಪ್ರಕಾರ, ಇಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ತುಂಗಭದ್ರ ನದಿಯ ಕುರುವತ್ತಿಯಲ್ಲಿ ಶಿವ ಮಲ್ಲಿಕಾರ್ಜುನ ಲಿಂಗ ರೂಪದಲ್ಲಿ ಅವತರಿಸಿ ದಾನವರನ್ನು ಸಂಹರಿಸಿದ್ದಾನೆಂದು ಪ್ರತೀತಿ ಇದೆ. ಸುಂದರ ಶಿಲ್ಪ ವೈಭವವನ್ನು ಹೊಂದಿರುವ ಈ ಪುರಾತನ ದೇವಾಲಯವನ್ನು ಕಲ್ಯಾಣಿ ಚಾಲುಕ್ಯರ ವಂಶದ ದೊರೆ ಒಂದನೇ ಸೋಮೇಶ್ವರ (ಕ್ರಿ.ಶ.1044-ಕ್ರಿ.ಶ.1068) ತನ್ನ ಅಳ್ವಿಕೆಯಲ್ಲಿ ಕಟ್ಟಿಸಿದ್ದಾನೆಂದು ಇತಿಹಾಸ ಹೇಳುತ್ತದೆ.