ಬಾಗಲಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ಎಂ. ನಾಗರಾಜ, ಕುರುಬ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಕುರುಬ ಸಮಾಜವನ್ನು ಕಡೆಗಣಿಸಿದೆ ಸಿದ್ದರಾಮಯ್ಯ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದರು.

ಬಾಗಲಕೋಟೆ (ಅ.30): ಕುರುಬ ಸಮಾಜದ ಏಳ್ಗೆ ಹಾಗೂ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಬೆಂಬಲ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ.ಎಂ. ನಾಗರಾಜ ಮನವಿ ಮಾಡಿದರು.

ಬಿಜೆಪಿ ಬಾಗಲಕೋಟೆ ವತಿಯಿಂದ ನಗರದ ಬಿ.ವಿ.ವಿ. ಸಂಘದ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕುರುಬ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದಿಂದ ಕುರುಬ ಸಮಾಜ ಕಡೆಗಣನೆ?

ಭಾರತೀಯ ಜನತಾ ಪಕ್ಷವು ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ದೇಶದಲ್ಲಿ ಕುರುಬ ಸಮಾಜದ ಐವರು ನಾಯಕರನ್ನು ಬಿಜೆಪಿಯಿಂದ ರಾಜ್ಯಸಭೆಗೆ ಕಳುಹಿಸಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಈವರೆಗೆ ಕುರುಬ ಸಮಾಜದ ಒಬ್ಬರನ್ನೂ ರಾಜ್ಯಸಭೆಗೆ ಕಳುಹಿಸಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯರನ್ನ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ

ರಾಜ್ಯದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಇಂದು ನಡೆಸಿಕೊಳ್ಳುತ್ತಿರುವ ರೀತಿಯನ್ನು ಸಮಾಜ ಗಮನಿಸಬೇಕು. ಈ ವಿಚಾರದಲ್ಲಿ ಕುರುಬ ಸಮಾಜ ಸೂಕ್ತ ಉತ್ತರ ನೀಡಬೇಕಿದೆ. ಸಮುದಾಯದ ಬಗ್ಗೆ ಆಶಾಭಾವನೆ ಹೊಂದಿರುವ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕುರುಬ ಸಮಾಜದಲ್ಲಿ ನಾಯಕತ್ವದ ಕೊರತೆ

ಕುರುಬ ಸಮಾಜದಲ್ಲಿ ನಾಯಕತ್ವದ ಕೊರತೆಯಿದೆ, ಸಮಾಜ ಆರ್ಥಿಕವಾಗಿ ಹಿಂದುಳಿದಿದೆ ಹಾಗೂ ಸಮುದಾಯದ ಏಳ್ಗೆಗಾಗಿ ಶ್ರಮಿಸುವವರ ಸಂಖ್ಯೆ ಕಡಿಮೆಯಿದೆ ಎಂಬ ಅಭಿಪ್ರಾಯಗಳಿವೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ವಿಶೇಷವಾಗಿ ಯುವಜನರು ಸೇರಿದಂತೆ ಸಮಾಜದ ಎಲ್ಲರೂ ರಾಜಕೀಯವಾಗಿ ಸಕ್ರಿಯರಾಗಿ, ಬಿಜೆಪಿಗೆ ಬೆಂಬಲ ನೀಡುವ ಮೂಲಕ ಉತ್ತಮ ನಾಯಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರೊಂದಿಗೆ ಪ್ರೊ. ಎಂ. ನಾಗರಾಜ ಅವರು ಸಮಾಲೋಚನೆ ನಡೆಸಿದರು.

ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹಾಗೂ ರಾಜ್ಯಸಭಾ ಸದಸ್ಯ ಅವರು ಸಭೆಯ ನಂತರ ಪ್ರೊ. ಎಂ. ನಾಗರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು.

ಬಾಗಲಕೋಟೆ ಜಿಲ್ಲಾ ಕುರುಬ ಸಮಾಜದ ಮುಖಂಡರಾದ ಎಚ್.ಡಿ. ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಹುಂಡೋಡಿ, ಡಾ. ದೇವರಾಜ ಪಾಟೀಲ, ಮಹಾಂತೇಶಗೌಡ ಪಾಟೀಲ, ಎಂ.ಎನ್. ಶಾಂತಗಿರಿ, ಡಿ.ಬಿ. ಸಿದ್ದಾಪುರ, ಪ್ರಮೋದ ಕವಡಿಮಟ್ಟಿ, ಯಮನಪ್ಪ ಹೊರಟ್ಟಿ ಸೇರಿದಂತೆ ನೂರಾರು ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.