ಕೇಳಿ ಸಚಿವ ಸ್ಥಾನ ಪಡೆಯಲ್ಲ : ಜನರ ಸೇವೆಯೇ ನನಗೆ ಮುಖ್ಯ
- ‘ನನ್ನನ್ನು ಮಂತ್ರಿ ಮಾಡಿ ಎಂದು ನಾನು ಕೇಳುವುದಿಲ್ಲ, ಮಂತ್ರಿ ಮಾಡುವುದಾದರೆ ಬೋರ್ಡ್ ಹಾಕಿಕೊಳ್ಳುವುದಕ್ಕೆ ಮಂತ್ರಿ ಮಾಡುವುದು ಬೇಡ
- ಜನರಿಗೆ ಏನಾದ್ರೂ ಒಳ್ಳೆಯದು ಮಾಡುವ ಮಂತ್ರಿ ಸ್ಥಾನ ಕೊಟ್ಟರೆ ಮಾತ್ರ ಒಪ್ಪಿಕೊಳ್ಳುತ್ತೇನೆ
ಉಡುಪಿ (ಜು.30): ‘ನನ್ನನ್ನು ಮಂತ್ರಿ ಮಾಡಿ ಎಂದು ನಾನು ಕೇಳುವುದಿಲ್ಲ, ಮಂತ್ರಿ ಮಾಡುವುದಾದರೆ ಬೋರ್ಡ್ ಹಾಕಿಕೊಳ್ಳುವುದಕ್ಕೆ ಮಂತ್ರಿ ಮಾಡುವುದು ಬೇಡ, ಜನರಿಗೆ ಏನಾದ್ರೂ ಒಳ್ಳೆಯದು ಮಾಡುವ ಮಂತ್ರಿ ಸ್ಥಾನ ಕೊಟ್ಟರೆ ಮಾತ್ರ ಒಪ್ಪಿಕೊಳ್ಳುತ್ತೇನೆ’ ಇದು ಕುಂದಾಪುರ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿಅವರ ನೇರಾನೇರ ಮಾತು.
ಏಶಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, 5 ಬಾರಿ ಆಯ್ಕೆಯಾಗಿರುವ ಶಾಸಕ, ನಾನು ಯಾವತ್ತೂ ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಲು ಹೋಗಿಲ್ಲ, ಒಂದು ಬಾರಿ ಅವರೇ ಮಂತ್ರಿ ಮಾಡುತ್ತೇವೆ ಎಂದು ಬರಲು ಹೇಳಿ, ಮಾಡದೇ ಅಗೌರವ ಮಾಡಿದ್ದಾರೆ ಎಂದವರು ಹಳೆಯ ಅಸಮಾಧಾನ ಹೊರಹಾಕಿದರು.
ಸ್ವಾಭಿಮಾನ, ಗೌರವದಿಂದ ಸಂಪುಟ ಸೇರಲ್ಲ: ಶೆಟ್ಟರ್
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಮ್ಮನ್ನು ಮತ ಹಾಕಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ, ಈಗ ಸಂಬಂಧಪಟ್ಟವರು ಮಂತ್ರಿಗಳನ್ನು ಆಯ್ಕೆ ಮಾಡಬೇಕು. ಮಂತ್ರಿಗಿರಿಗೆ ಲಾಬಿ ಮಾಡುವುದು, ಗಿರಕಿ ಹೊಡೆಯುವುದು ನನ್ನ ಕಸುಬು ಅಲ್ಲ. ಯಾರ ಮನೆಗೆ ಸುತ್ತುವುದು, ಕಾಲಿಗೆ ಬೀಳುವುದು ನನ್ನ ಜಾಯಮಾನ ಅಲ್ಲ ಎಂದರು.
ಉಪಯೋಗ ಇಲ್ಲದ್ದು ಬೇಡ:
ಅವರು ಕೊಡುವ ಖಾತೆ ಯಾವುದು ಅನ್ನೋದು ಕೂಡಾ ನನಗೆ ಬಹಳ ಮುಖ್ಯ, ಜನರಿಗೆ ಏನಾದ್ರೂ ಒಳ್ಳೆಯದಾಗುವುದಿದ್ದರೆ ಮಾತ್ರ ಅವಕಾಶ ಬಳಸಿಕೊಳ್ಳುತ್ತೇನೆ, ನಾಮಕಾ ವಾಸ್ತೇ ಸಚಿವಗಿರಿ ನನಗೆ ಬೇಡ, ಬೋರ್ಡ್‌ಗಾಗಿ ಸಚಿವ ಆಗುವುದಿಲ್ಲ. ಯಾರಾದರೂ ಬಾಕ್ಸ್ ಕೊಟ್ಟರೂ ಅದರಲ್ಲಿ ಏನಿದೆ ಅಂತ ನೋಡದೆ ತಗೆದುಕೊಳ್ಳುವುದಿಲ್ಲ. ಉಪಯೋಗ ಇಲ್ಲದನ್ನು ಕೊಟ್ಟರೇ ಅಲ್ಲಿಯೇ ಬಿಟ್ಟು ಬರುತ್ತೇನೆ, ಮಂತ್ರಿ ಪದವಿಯೂ ಅಷ್ಟೇ ಎಂದು ಮಾರ್ಮಿಕವಾಗಿ ನುಡಿದರು.
ನಾನು ಮಂತ್ರಿಯಾದರೆ ಸರ್ಕಾರಿ ಕಾರಲ್ಲಿಯೂ ತಿರುಗುವುದಿಲ್ಲ, ಎಸ್ಕಾರ್ಟ್ ತಗೆದುಕೊಳ್ಳುವುದಿಲ್ಲ, ನನಗೆ ಗನ್‌ಮ್ಯಾನ್ ಕೂಡ ಬೇಡ. ಇದು ದುರಹಂಕಾರದ ಮಾತಲ್ಲ, ನಾನು ಯಾರ ಭಯದಲ್ಲಿಯೂ ಇಲ್ಲ, ಮತದಾರರ ಮತ್ತು ಕಾರ್ಯಕರ್ತರ ಋುಣದಲ್ಲಿ ಮಾತ್ರ ಇದ್ದೇನೆ ಎಂದವರು ಕಡ್ಡಿಮುರಿದಂತೆ ಹೇಳಿದರು.
ಸರ್ಕಾರದಲ್ಲಿ ಎಲ್ಲರೂ ನನಗೆ ಆತ್ಮೀಯರು, ಆದರೆ ಕೆಲವರಿಗೆ ನನ್ನ ಮೇಲೆ ಆತ್ಮೀಯತೆ ಇಲ್ಲ. ನಾನಂತೂ ಸ್ಥಿತಪ್ರಜ್ಞ ಯಾವತ್ತೂ ಸಮತೋಲನ ಕಳೆದುಕೊಳ್ಳುವುದಿಲ್ಲ. ಆಸೆಯೇ ದುಃಖಕ್ಕೆ ಕಾರಣ ಎಂದು ಗೌತಮ ಬುದ್ದ ಹೇಳಿದ್ದಾರೆ. ತೆಗೆದುಕೊಂಡು ಹೋಗಲು ನೀನು ತಂದದ್ದಾದರೂ ಏನು ಎಂದು ಭಗವದ್ಗೀತೆ ಹೇಳಿದೆ. ನಾನು ಜೀವನದಲ್ಲಿ ಯಾವುದೇ ಭ್ರಮೆಯಲ್ಲಿಯೂ ಇಲ್ಲ, ಏನೇ ಆದರೂ ನನಗೆ ಯಾವುದೇ ಆಘಾತವೂ ಆಗುವುದಿಲ್ಲ ಎಂದವರು ಹೇಳಿದರು.
ಜಾತಿ ಹೆಸರಿನಲ್ಲಿ ನನ್ನನ್ನು ಮಂತ್ರಿ ಮಾಡುವುದು ಬೇಡ
ನಾನು ಬಂಟ ಜಾತಿಯವ ಎಂಬ ಕಾರಣಕ್ಕೆ ನನ್ನನ್ನು ಮಂತ್ರಿ ಮಾಡುವುದು ಬೇಡ, ನಾನು ಹುಟ್ಟಿದಾಗಿನಿಂದ ಜಾತಿಯ ಸಂಘಕ್ಕೆ ಹೋದವನಲ್ಲ, ಬಂಟ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ, ನನಗೆ ಎಲ್ಲಾ ಜಾತಿಯ ಮತದಾರರು ಮತ ಹಾಕಿದ್ದಾರೆ. ನನ್ನ ಜಾತಿಯ ಉದ್ಧಾರಕ್ಕೆ ನನಗೆ ಮತ ಹಾಕಿದ್ದಲ್ಲ. ಜಾತಿವಾದಿಗಳು ಸಚಿವರಾಗಬಾರದು, ಅವರು ತಮ್ಮ ಜಾತಿಯಲ್ಲಿಯೇ ಮಂತ್ರಿಯಾಗಿರಬೇಕು ಎಂದವರು ತಮ್ಮ ಜಾತ್ಯತೀತ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.