Asianet Suvarna News Asianet Suvarna News

ಎಸ್ಟಿ ಸೇರ್ಪಡೆಗೆ ಕುಣಬಿ ಸಮುದಾಯ ಅರ್ಹ: ಗೋವಾ ಸ್ಪೀಕರ್‌ ರಮೇಶ ತಾವಡಕರ

ಗೋವಾ, ಕರ್ನಾಟಕದಲ್ಲಿ ಇರುವ ಕುಣಬಿ ಸಮುದಾಯದ ಸಂಪ್ರದಾಯ, ಆಚಾರ ಒಂದೇ ರೀತಿಯಾಗಿದ್ದು, ಕರ್ನಾಟಕದವರು ಪರಿಶಿಷ್ಟಪಂಗಡಕ್ಕೆ ಸೇರಿಸಲು ಅರ್ಹರಾಗಿದ್ದಾರೆ ಎಂದು ಗೋವಾ ಸ್ಪೀಕರ್‌ ರಮೇಶ ತಾವಡಕರ ಹೇಳಿದರು.

Kunabi community eligible for ST inclusion says Goa Speaker rav
Author
First Published Jan 21, 2023, 7:10 AM IST

ಕಾರವಾರ (ಜ.21) : ಗೋವಾ, ಕರ್ನಾಟಕದಲ್ಲಿ ಇರುವ ಕುಣಬಿ ಸಮುದಾಯದ ಸಂಪ್ರದಾಯ, ಆಚಾರ ಒಂದೇ ರೀತಿಯಾಗಿದ್ದು, ಕರ್ನಾಟಕದವರು ಪರಿಶಿಷ್ಟಪಂಗಡಕ್ಕೆ ಸೇರಿಸಲು ಅರ್ಹರಾಗಿದ್ದಾರೆ ಎಂದು ಗೋವಾ ಸ್ಪೀಕರ್‌ ರಮೇಶ ತಾವಡಕರ ಹೇಳಿದರು.

ಕುಣಬಿ ಸಮುದಾಯ(Kunabi community)ದವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿರುವ ಕುಣಬಿ ಸಮುದಾಯದವರನ್ನು ಕೇಂದ್ರ ಸರ್ಕಾರ ಪರಿಶಿಷ್ಟಪಂಗಡಕ್ಕೆ ಈಗಾಗಲೇ ಸೇರಿಸಿದೆ. ಭಾಷಾವಾರು, ಪ್ರಾಂತ್ಯವಾರು ರಾಜ್ಯ ರಚನೆ ಆಗುವ ಪೂರ್ವದಲ್ಲಿ ಗೋವಾ ಮತ್ತು ಕರ್ನಾಟಕದ ಕುಣಬಿಗಳು ಒಂದೇ ಪ್ರದೇಶದಲ್ಲಿ ನೆಲೆಸಿದ್ದರು. ಕಾಲಾನಂತರ ಇಬ್ಭಾಗವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

Uttara Kannada: ಪರಿಶಿಷ್ಟ ಪಂಗಡದ ಬೇಡಿಕೆ: ಹೋರಾಟಕ್ಕೆ ಅಣಿಯಾದ ಕುಣಬಿ ಸಮುದಾಯ

ನೀವೆಲ್ಲರೂ ಮೂಲತಃ ಗೋವಾದವರೇ ಆಗಿದ್ದೀರಿ. ಎರಡೂ ರಾಜ್ಯದಲ್ಲಿ ಇರುವವರು ಕೂಡ ಒಂದೇ ಸಂಸ್ಕೃತಿ, ಸಂಪ್ರದಾಯ ಹೊಂದಿದ್ದು, ಪೂಜೆ ಪುನಸ್ಕಾರ ಕೂಡ ವಿಭಿನ್ನವಾಗಿಲ್ಲ. ಗೋವಾದಲ್ಲಿ ಪರಿಶಿಷ್ಟಪಂಗಡಕ್ಕೆ ಸೇರಿಸಿದಂತೆ ಇಲ್ಲೂ ಸೇರಿಸಬೇಕು. ಅರ್ಹತೆ ಇದೆ. ತಾವು ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ಮಾಡಿ ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಮಾಜಿ ಸಚಿವ ಆನಂದ ಅಸ್ನೋಟಿಕರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಿಂತ ಹಿರಿಯ ಜನಪ್ರತಿನಿಧಿಗಳು ನಮ್ಮ ಜಿಲ್ಲೆಯಲ್ಲಿದ್ದಾರೆ. 25 ವರ್ಷಗಳ ಕಾಲ ಸಚಿವರಾಗಿ ಕೆಲಸ ಮಾಡಿದವರು ಹಳಿಯಾಳದಲ್ಲಿದ್ದಾರೆ. ನಮ್ಮ ಜಿಲ್ಲೆ ರಾಜಕೀಯವಾಗಿ ಸಾಕಷ್ಟುಶಕ್ತಿ ಹೊಂದಿದವರಿದ್ದು, ಆದರೆ ದುರದೃಷ್ಟಕರ ಸಂಗತಿಯಂದರೆ ಯಾರು ಕುಣಬಿ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ವಿಧಾನ ಸಭಾ ಚುನಾವಣೆಗೆ ಇನ್ನು 2 ತಿಂಗಳು ಬಾಕಿಯಿದ್ದು, ನ್ಯಾಯ ಸಿಗದೇ ಇದ್ದರೆ ಚುನಾವಣೆ ಬಹಿಷ್ಕರಿಸಲು ಈ ಸಮುದಾಯದವರು ನಿರ್ಧರಿಸಿದ್ದಾರೆ. ರಾಜ್ಯ, ಕೇಂದ್ರ ಇದಕ್ಕೆ ಅವಕಾಶ ನೀಡಬಾರದು. ಅವರಿಗೆ ನ್ಯಾಯ ಒದಗಿಸಬೇಕು ಎಂದು ಅಭಿಪ್ರಾಯಿಸಿದರು.

ಮಾಜಿ ಶಾಸಕ ಸುನೀಲ ಹೆಗಡೆ, ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಕುಣಬಿ ಸಮುದಾದ ಜಿಲ್ಲಾಧ್ಯಕ್ಷ ಸುಭಾಸ್‌ ಗಾವುಡ ಮೊದಲಾದವರು ಇದ್ದರು.

ಕುಣಬಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜ.18ರಂದು ಜೋಯಿಡಾದಿಂದ ಪಾದಯಾತ್ರೆಯನ್ನು ಆರಂಭಿಸಿದ್ದು, 70 ಕಿ.ಮೀ. ಕ್ರಮಿಸಿ ಶುಕ್ರವಾರ ಕಾರವಾರಕ್ಕೆ ಬಂದಿತು. ಈ ಸಮುದಾಯದ 2 ಸಾವಿರಕ್ಕೂ ಅಧಿಕ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದರು.

ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಬದ್ಧ: ಸುಧಾಕರ್‌

ನಗರದ ಸಾಗರದರ್ಶನ ಸಭಾಭವನದ ಬಳಿ ಪಾದಯಾತ್ರೆ ಆಗಮಿಸಿದಾಗ ಗೋವಾ ರಾಜ್ಯದ ಸ್ಪೀಕರ್‌ ರಮೇಶ ತಾವಡಕರ ಜತೆಯಾದರು. ಬಳಿಕ ಪಾದಯಾತ್ರಿಕರೊಂದಿಗೆ ಎರಡು ಕಿ.ಮೀ. ದೂರ ಹೆಜ್ಜೆ ಹಾಕಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಜಮಾವಣೆಗೊಂಡರು. ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಮನವಿ ಸ್ವೀಕರಿಸಿದರು.

Follow Us:
Download App:
  • android
  • ios