ಹಾಸನ(ಆ.17): ಟೆಲಿಫೋನ್‌ ಕದ್ದಾಲಿಕೆ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರೇಣುಕುಮಾರ್‌ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1983ನೇ ಸಾಲಿನಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಪೋನ್‌ ಕದ್ದಾಲಿಕೆ ಹಗರಣ ನಡೆದಿತ್ತು. ಆಗ ಅವರು ನೈತಿಕವಾಗಿ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನ ಮೌಲ್ಯಾಧರಿತ ರಾಜಕಾರಣ ನೀಡುವ ಮೂಲಕ ಸಮಾಜಕ್ಕೆ ಒಂದು ಗೌರವ ತಂದುಕೊಟ್ಟಿದ್ದರು ಎಂದರು.

ಇಂದು ಈ ಕದ್ದಾಲಿಕೆ ಹಗರಣದಲ್ಲಿ ಮೇಲ್ನೊಟಕ್ಕೆ ಹಿಂದಿನ ಸರ್ಕಾರದ ರಾಜಕಾರಣಿಗಳ ಎರಡು ಮೂರು ಹೆಸರು ಕೇಳಿ ಬಂದರೂ ಸಹ ನಿಖರವಾಗಿ ಇಂತಹವರೇ ಕದ್ದಾಲಿಕೆ ಹಗರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗಬೇಕು. ಈ ಹಗರಣದಲ್ಲಿ ಪೊಲೀಸ್‌ ಅಧಿಕಾರಿ ಅನಂತಕುಮಾರ್‌ ಪಾತ್ರ ಪ್ರಮುಖವಾಗಿದೆ ಎನ್ನಲಾಗುತ್ತಿದ್ದು, ಇವರೂ ಕೂಡ ತನಿಖೆ ಪೂರ್ಣಗೊಳ್ಳುವವರೆಗೂ ಸ್ವಯಂ ಪ್ರೇರಿತವಾಗಿ ರಜೆ ಮೇಲೆ ತೆರಳಬೇಕು ಎಂದು ಆಗ್ರಹಿಸಿದರು.

ರಾಜೀನಾಮೆ ನೀಡಲಿ:

ರಾಜ್ಯದಲ್ಲಿ ಮೌಲ್ಯಾಧರಿತ ರಾಜಕಾರಣಕ್ಕೆ ಬೆಲೆ ಇದೆ ಎಂಬ ನಂಬಿಕೆ ಜನರಲ್ಲಿ ಇದ್ದು, ಇದರ ಹೊಣೆಯನ್ನು ಹೊತ್ತು ರಾಜಕಾರಣಿಗಳು ಹಾಗೂ ಹಿಂದಿನ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸುವಂತೆ ಮನವಿ ಮಾಡಿದರು.

ಹಾಸನ: ‘ಅಧಿಕಾರಿಗಳೇ ಹಣ ಡ್ರಾ ಮಾಡಿಕೊಳ್ಳಿ’

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಚ್‌.ಎನ್‌. ನಾಗೇಶ್‌, ಮಾಜಿ ಅಧ್ಯಕ್ಷ ಚನ್ನಕೇಶವ, ಸಕಲೇಶಪುರ ತಾಲೂಕು ಅಧ್ಯಕ್ಷ ಪ್ರತಾಪ್‌, ರಾಜ್ಯ ಪರಿಷತ್ತು ಸದಸ್ಯ ಲೋಕೇಶ್‌ ಇದ್ದರು.