'ಕುಕ್ಕೆ ಸುಬ್ರಹ್ಮಣ್ಯ ರೋಡ್‌ನಲ್ಲಿ ಭಾರೀ ನಿಧಿ..' ಗುಂಡಿ ತೋಡಲು ಇಳಿದ ರಾಜ್ಯ ಸರ್ಕಾರಕ್ಕೆ ಮಂಗಳಾರತಿ!
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೈಕಂಬ ನಡುವಿನ ರಸ್ತೆಯಲ್ಲಿ 'ನಿಧಿ ಶೋಧ'ದ ಹೆಸರಿನಲ್ಲಿ ಹೊಂಡಗಳನ್ನು ತೋಡಲಾಗಿದೆ ಎಂದು ತಮಾಷೆಯ ಬ್ಯಾನರ್‌ಗಳು ವೈರಲ್ ಆಗಿವೆ. ಸ್ಥಳೀಯರು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ, ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ.
ಬೆಂಗಳೂರು (ನ.12): ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೈಕಂಬ ನಡುವವಿನ ರಸ್ತೆಯಲ್ಲಿ ಪ್ರಯಾಣ ಮಾಡುವವರಿಗೆ ವಿಶೇಷ ಫಲಕವೊಂದು ಕಣ್ಣಿಗೆ ಕಾಣುತ್ತಿದೆ. ರಾಜ್ಯ ಸರ್ಕಾರ ಇಲ್ಲಿನ ರಸ್ತೆಯನ್ನು ಯಾವ ರೀತಿ ಹದಗೆಡಿಸಿ ಇಟ್ಟಿದೆ ಅನ್ನೋದನ್ನ ತಮಾಷೆಯ ರೀತಿಯಲ್ಲಿ ಅವರು ಹಾಕಿರುವ ಬ್ಯಾನರ್ ಅಲ್ಲಿನ ಸ್ಥಳೀಯರಿಗೆ ಸರ್ಕಾರದ ಮೇಲಿರುವ ಸಿಟ್ಟನ್ನು ತೋರಿಸಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಈ ಬ್ಯಾನರ್‌ಗಳನ್ನು ಹಾಕಲಾಗಿದ್ದು, ಪ್ರಯಾಣಿಕರ ಗಮನ ಸೆಳೆಯದೇ ಇರೋದಿಲ್ಲ. ಆದರೆ, ಈ ಬ್ಯಾನರ್ ಓದಿದ ಬಳಿಕ ನಿಮಗೆ ನಗು ಬರೋದಂತೂ ಗ್ಯಾರಂಟಿ. ರಸ್ತೆಗಿಂತ ಹೆಚ್ಚಾಗಿ ಈ ಮಾರ್ಗದಲ್ಲಿ ಗುಂಡಿಗಳೇ ಇದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಚಲಿಸಿ ಅನ್ನೋದನ್ನ ಎಷ್ಟು ಕ್ರಿಯೇಟಿವ್ ಆಗಿ ಹಾಕಬಹುದು ಅನ್ನೋದಕ್ಕೆ ಈ ಬ್ಯಾನರ್ ಸಾಕ್ಷಿಯಾಗಿದೆ. ಈ ಬ್ಯಾನರ್ ಈಗ ಫುಲ್ ವೈರಲ್ ಆಗಿದೆ. ಈ ರೀತಿಯ ಬ್ಯಾನರ್ ಹಾಕುವುದು ವಿಶೇಷವೇನೆಲ್ಲ. ಆದರೆ, ಬ್ಯಾನರ್‌ನ ಮೇಲೆ ಬರೆದಿರುವ ಸಾಲುಗಳು ಪ್ರಯಾಣಿಕರ ಗಮನಸೆಳೆದಿದೆ.
ಮಾರ್ಗದ ಉದ್ದಕ್ಕೂ ಸಿಗುವ ರಸ್ತೆ ಬದಿಯ ಕಂಬಗಳಿಗೆ ಈ ಫಲಕಗಳನ್ನು ಅಳವಡಿಸಲಾಗಿದೆ. ಅದರಲ್ಲಿ 'ಎಚ್ಚರಿಕೆಯ ಫಲಕ' ಹಾಗೂ 'ನಿಧಾನವಾಗಿ ಚಲಿಸಿ..' ಅನ್ನೋ ಸಾಲುಗಳನ್ನು ದೊಡ್ಡದಾಗಿ ಬರೆದಿದ್ದರೆ, ಇವುಗಳ ನಡುವೆ, 'ಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗಯೇ ಬಿಟ್ಟಿದ್ದಾರೆ..' ಎಂದು ಬರೆಯಲಾಗಿದೆ. ಈ ಬ್ಯಾನರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
ಸ್ಥಳೀಯ ಆಡಳಿತ ರಸ್ತೆ ವ್ಯವಸ್ಥೆಗಳ ಬಗ್ಗೆ ತಾತ್ಸಾರ ಧೋರಣೆಯನ್ನು ಹೊಂದಿದ್ದು, ಸಣ್ಣ ಮಟ್ಟದ ರಿಪೇರಿಗೂ ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಳಲಾಗಿದೆ. ಗ್ಯಾರಂಟಿಗಳನ್ನು ಕೊಟ್ಟು ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ. ಅದಕ್ಕಾಗಿ ರಸ್ತೆಯಲ್ಲಿ ನಿಧಿ ಹುಡುಕೋಕೆ ಹೊಂಡಗಳನ್ನು ತೋಡುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ವೈರಲ್ ಬ್ಯಾನರ್ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತವನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಅದರೊಂದಿಗೆ ಸ್ಥಳೀಯ ಜನರು ಈ ಬ್ಯಾನರ್‌ನ ಫೋಟೋಗೆ ತಮ್ಮೂರಿನ ರಸ್ತೆಗಳ ಚಿತ್ರಗಳನ್ನೂ ಹಂಚಿಕೊಂಡು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
Weather Report: ನ.15ರವರೆಗೆ ಬೆಂಗಳೂರಿನಲ್ಲಿ ಮಳೆಯ ಅಬ್ಬರ, ಐಎಂಡಿ ಅಲರ್ಟ್
ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡದ ಹೆಸರಾಂತ ನಾಗ ಕ್ಷೇತ್ರ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಇಲ್ಲಿನ ರಸ್ತೆಗಳ ಬಗ್ಗೆ ಮಾತ್ರ ಸರ್ಕಾರ ತಾತ್ಸಾರ ಧೋರಣೆ ಹೊಂದಿದೆ. ಸಂಪೂರ್ಣ ಹದಗೆಟ್ಟಿರುವ ಈ ರಸ್ತೆಯನ್ನು ಹೊಸದಾಗಿ ಮರು ನಿರ್ಮಾಣ ಮಾಡಿ, ಭಕ್ತಾದಿಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ನಿವಾಸಿಗಳು ಹಲವು ಬಾರಿ ಮನವಿ ಮಾಡಿದ್ದಾರೆ.ಆದರೆ, ಯಾವುದಕ್ಕೂ ಸ್ಪಂದನೆ ದೊರೆತಿಲ್ಲ.
ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ, ಮತ್ತಷ್ಟು ಕುಸಿಯುತ್ತಾ?