ಕುಕ್ಕೆ ಸುಬ್ರಹ್ಮಣ್ಯ(ಮಾ.  01)  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ  ಆಚರಣೆ ಸಂಬಂಧ ವಿವಾದ ಹುಟ್ಟಿಕೊಂಡಿತ್ತು. ಈ ಬಗ್ಗೆ ಸಭೆ ನಡೆದಿದ್ದು ಒಮ್ಮತದ ನಿರ್ಣಯ ಬಂದಿದೆ.

ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷ ಕಶೇಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಸರ್ಕಾರದ ಪರವಾಗಿ ನಾವು ಇಲ್ಲಿ ಬಂದು ಸಭೆ ನಡೆಸಿದ್ದೇವೆ. ಕ್ಷೇತ್ರದ ಅರ್ಚಕರು, ಹಿತರಕ್ಷಣಾ ಸಮಿತಿ, ದೇವಸ್ಥಾನದ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹಾರ ಮಾಡಲಾಗಿದೆ. ಕ್ಷೇತ್ರದ ಸಂಪ್ರದಾಯಗಳಿಗೆ ಅಪಚಾರ ಆಗದಂತೆ ಶಿವರಾತ್ರಿ ಉತ್ಸವ ನಡೆಯಲಿದೆ. ನಮ್ಮ ನಿರ್ಧಾರ ಸರ್ಕಾರಕ್ಕೆ ತಿಳಿಸುತ್ತೇವೆ.  ಎರಡು ದಿನಗಳಲ್ಲಿ ಸರ್ಕಾರ ಆದೇಶ ಮಾಡಲಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರದ ಸಂಪ್ರದಾಯಕ್ಕೆ ತೊಂದರೆಯಾದರೆ ಸರ್ಕಾರ, ಕ್ಷೇತ್ರದ ಅರ್ಚಕರು ಮತ್ತು ಆಡಳಿತ ಮಂಡಳಿ ಇದೆ. ಅದು ಬಿಟ್ಟು ಯಾರೋ ಎಲ್ಲಿಯೋ ಸುದ್ದಿಗೋಷ್ಠಿ ಮಾಡೋದು ತಪ್ಪು. ಎಲ್ಲರ ಹೇಳಿಕೆ ತೆಗೆದುಕೊಂಡು ನಾವು ಪ್ರತಿಕ್ರಿಯೆ ಕೊಡಲು ಆಗಲ್ಲ ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಸಂಪ್ರದಾಯಕ್ಕೆ ಧಕ್ಕೆ ತರಲ್ಲ.  ಹೀಗಾಗಿ ಈ ಬಾರಿ ವೈಭವದಿಂದ ಶಿವರಾತ್ರಿ ಉತ್ಸವ ನಡೆಯುತ್ತದೆ ಸಂಪ್ರದಾಯ ವಿರೋಧಿ ಆಗದಂತೆ ಹಿತರಕ್ಷಣಾ ಸಮಿತಿ ಕೇಳಿಕೊಂಡ ಬೇಡಿಕೆಗೆ ಒಪ್ಪಿದ್ದೇವೆ  ಎಂದಿದ್ದಾರೆ.

ಅಷ್ಟಕ್ಕೂ ಕುಕ್ಕೆಯಲ್ಲಿ ಹುಟ್ಟಿಕೊಂಡಿದ್ದ ವಿವಾದ ಏನು?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಭೆ ನಡೆಯಿತು. ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.ಹಿತರಕ್ಷಣಾ ಸಮಿತಿ ಆಗ್ರಹದಂತೆ ಮಾ.11ರಂದು ಕುಕ್ಕೆಯಲ್ಲಿ ವೈಭವದ ಶಿವರಾತ್ರಿ ಆಚರಣೆಗೆ ಸಭೆ ಒಪ್ಪಿಗೆ ನೀಡಿತು.  ರುದ್ರಹೋಮ, ಕಲಶಾರಾಧನೆ, ಮಂಡಲಾರಧನೆ, ಬಿಲ್ವಾರ್ಚನೆ ಮೂಲಕ ಮಧ್ಯರಾತ್ರಿ 12 ಗಂಟೆಯವರೆಗೆ ಕುಕ್ಕೆಯಲ್ಲಿ ಶಿವರಾತ್ರಿ ಜಾಗರಣೆ ನಡೆಯಲಿದೆ. ಶಿವರಾತ್ರಿ ಆಚರಣೆಗೆ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆಯಂತೆ ಸಭೆ ನಡೆಯಿತು.