.ಕೈ ಬಿಟ್ಟು ತೆನೆಹೊತ್ತ ಕೆ.ಟಿ. ಶಾಂತಕುಮಾರ್
:ಜನತೆ ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚು ಪ್ರಾತಿನಿದ್ಯ ನೀಡಿದ್ದು ನಾನು ಯಾವುದೇ ಪಕ್ಷಕ್ಕೆ ಸೇರಿದರೂ ಜನತೆಯ ಆಶೀರ್ವಾದ ನನ್ನ ಮೇಲಿದ್ದು ಅವರ ಒತ್ತಾಸೆಯಂತೆ ಕಾಂಗ್ರೆಸ್ ಪಕ್ಷ ತೊರೆದು ಫೆ.3ರಂದು ಪಕ್ಷದ ವರಿಷ್ಠರಾದ ಹೆಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆಂದು ಸಮಾಜ ಸೇವಕ ಕೆ.ಟಿ. ಶಾಂತಕುಮಾರ್ ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸಿದರು.
ತಿಪಟೂರು:ಜನತೆ ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚು ಪ್ರಾತಿನಿದ್ಯ ನೀಡಿದ್ದು ನಾನು ಯಾವುದೇ ಪಕ್ಷಕ್ಕೆ ಸೇರಿದರೂ ಜನತೆಯ ಆಶೀರ್ವಾದ ನನ್ನ ಮೇಲಿದ್ದು ಅವರ ಒತ್ತಾಸೆಯಂತೆ ಕಾಂಗ್ರೆಸ್ ಪಕ್ಷ ತೊರೆದು ಫೆ.3ರಂದು ಪಕ್ಷದ ವರಿಷ್ಠರಾದ ಹೆಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆಂದು ಸಮಾಜ ಸೇವಕ ಕೆ.ಟಿ. ಶಾಂತಕುಮಾರ್ ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8-9ವರ್ಷಗಳಿಂದ ಜನ ಸೇವೆ ಮಾಡುತ್ತಿರುವ ನಾನು, ಜನರ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೇನೆ. ತಾಲೂಕಿನಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯದ ಅವಶ್ಯಕತೆ ಇದೆ. ಅಧಿಕಾರವಿಲ್ಲದಿದ್ದರೂ ಜನಸೇವೆ ಮಾಡುತ್ತಿರುವ ನಾನು, ಶಾಸಕನಾದರೆ ನಿಮ್ಮ ಮನೆ ಮಗನಂತೆ ಕೆಲಸ ಮಾಡುವೆ. ಕುಡಿವ ನೀರು, ಉದ್ಯೋಗ ಮೇಳ, ಕೋವಿಡ್ ವೇಳೆ ಮಾಡಿದ ಸೇವೆಯನ್ನು ಜನತೆ ಮರೆತಿಲ್ಲ. ನಾನು, ಜಾತ್ಯಾತೀತ ನಾಯಕನಾಗಿದ್ದು, ಯಾವುದೇ ಒಂದು ಜಾತಿಗೆ ಸೀಮಿತನಾಗಿಲ್ಲ. ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ 14 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದು, ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಕೊಡುವುದು ಖಚಿತವೆಂದು ತಿಳಿದು ಕಾಂಗ್ರೆಸ್‌ನಲ್ಲಿ ರಾಜ್ಯಮಟ್ಟದಲ್ಲಿ ಪಕ್ಷಕ್ಕಾಗಿ ದುಡಿದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾಯದರ್ಶಿಯಾಗಿ ಸೇವೆ ಸಲ್ಲಿಸಿದೆ. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದ ವರಿಷ್ಠರು ಟಿಕೆಟ್ ಬಗ್ಗೆ ನಿಶ್ಚಿತ ಒಲವು ತೋರಿಸಲಿಲ್ಲ. ಪಕ್ಷದ ಬೇರೆ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಹೇಳಿದಾಗ, ನಾನು ನಿರಾಕರಿಸಿ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದ್ದರೂ ನನಗೆ ಟಿಕೆಟ್ ಕೊಡಲು ಹಿಂಜರಿಕೆ ವ್ಯಕ್ತಪಡಿಸಿತು. ಮನನೊಂದ ನಾನು, ನನ್ನದೇ ಕಾರ್ಯಕರ್ತರ ಮತ್ತು ಜನತೆಯ ಅಭಿಪ್ರಾಯ ಪಡೆದು ಅವರ ನಿರ್ಧಾರದಂತೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ತಾಲೂಕಿನ ಜನರ ಸೇವೆಯೇ ನನ್ನ ಉದ್ದೇಶ, ಚುನಾವಣೆಯಲ್ಲಿ ಹಿಂದೆ ಸರಿಯುವ ಮಾತಿಲ್ಲ. ಜೆಡಿಎಸ್ ಪಕ್ಷ ಸದೃಢಗೊಳಿಸುವ ಕೆಲಸ ಮಾಡುತ್ತೇನೆ. ಹೆಚ್.ಡಿ. ಕುಮಾರಸ್ವಾಮಿಯವರು ನನ್ನ ಮೇಲೆ ವಿಶ್ವಾಸವಿಟ್ಟಿದ್ದು, ಅವರಿಗೆ ಶಕ್ತಿ ತುಂಬಿ ಕೆಲಸ ಮಾಡಿ, ಅವರನ್ನು ಮುಖ್ಯಮಂತ್ರಿಯನ್ನಾಗಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ: ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ನಾನು, ಸದ್ಯದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನನ್ನು ದುಡಿಸಿಕೊಂಡು ಕೈಬಿಟ್ಟಿತು. ಡಿ.ಕೆ.ಶಿವಕುಮಾರ್ ಅವರು ಕೊನೆಯ ಹಂತದಲ್ಲಿ ಮುಂದಿನ ಅವಕಾಶದವರೆಗೂ ಕಾಯಬೇಕೆಂದು ಕಣ್ಣೊರೆಸುವ ಕೆಲಸ ಮಾಡಿದರು. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ. ಜನತೆಯ ಆಸೆಯಿಂದ ನಾನು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು, ಚುನಾವಣೆಯಲ್ಲಿ ಜನರು ನನಗೆ ಶಕ್ತಿ ತುಂಬಲಿದ್ದು, ಅವರ ಆಶೀರ್ವಾದ ನನ್ನ ಮೇಲಿದೆ ಎಂದರು.
ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್. ಶಿವಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಕೆ.ಟಿ. ಶಾಂತಕುಮಾರ್‌ರನ್ನು ಹಲವು ಬಾರಿ ಒತ್ತಾಯಿಸಲಾಗಿತ್ತು. ಈಗ ಮನಸ್ಸು ಮಾಡಿ ಜನತೆಯ ಆಶಯದಂತೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಶಕ್ತಿ ಮೀರಿ ಜೆಡಿಎಸ್ ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯೆ ರಾಧಾನಾರಾಯಣಗೌಡ, ಜೆಡಿಎಸ್ ಮುಖಂಡರಾದ ಗಂಗನಘಟ್ಟಗೋವಿಂದಸ್ವಾಮಿ, ಮಾದಿಹಳ್ಳಿ ತಿಮ್ಮೇಗೌಡ, ಮಲ್ಲೇನಹಳ್ಳಿ ಜಗದೀಶ್, ರಾಕೇಶ್, ರಂಗಾಪುರ ಚಂದ್ರಶೇಖರ್, ಪರುಗೊಂಡನಹಳ್ಳಿ ಮಂಜುನಾಥ್, ಬಾಳೇಕಾಯಿ ಮಂಜುನಾಥ್, ರಾಜಶೇಖರ್, ಸೈಯದ್ ಅಲಿಂ, ಶಶಿಧರ್, ಬಿಳಿಗೆರೆ ಕುಮಾರ್, ಬೆಸುಗೆ ಗ್ರಾ.ಪಂ ಸದಸ್ಯ ನಟರಾಜು, ಕೆಟಿಎಸ್ ಬಳಗದ ಸುದರ್ಶನ್, ಮೋಹನ್ ಬಾಬು ಇದ್ದರು.