'ಸರ್ಕಾರಗಳು ಕರಾಳ ಕೃಷಿ ಕಾಯ್ದೆ ಮೂಲಕ ರೈತನಿಗೆ ವಿಷವಿಕ್ಕುವ ಕೆಲಸ ಮಾಡ್ತಿವೆ'
ನಿಮ್ಮ ಸಾಲ ಮನ್ನಾ ರೈತರಿಗೆ ಅಗತ್ಯವಿಲ್ಲ| ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಕೊಡಿ. ನಿಮ್ಮ ಸಾಲ ಮರುಪಾವತಿ ಮಾಡುವ ಹೊಣೆ ರೈತನದ್ದಾಗಿದೆ| ಗುತ್ತಿಗೆ ಕೃಷಿ ಪದ್ಧತಿ, ಅಗತ್ಯ ವಸ್ತುಗಳ ನಿಯಂತ್ರಣ ಕಾನೂನು ಇವುಗಳೆಲ್ಲ ರೈತರಿಗೆ ಮಾರಕ|
ಹಾವೇರಿ(ಮಾ.21): ರಾಜಕಾರಣಿಗಳ ಹಂಗಿನ ರಾಜಕೀಯ ಘೋಷಣೆಗಳು ರೈತರಿಗೆ ಅಗತ್ಯವಿಲ್ಲ. ಕನಿಷ್ಠ ಬೆಂಬಲ ಬೆಲೆ ನೀಡುವ ಕಾಯ್ದೆ ಜಾರಿಗೆ ತರಬೇಕು ಎಂದು ರಾಜ್ಯ ರೈತ ನಾಯಕ ಕೆ.ಟಿ. ಗಂಗಾಧರ್ ಆಗ್ರಹಿಸಿದ್ದಾರೆ.
ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕಿಸಾನ್ ಮೋರ್ಚಾ ಹಾಗೂ ಐಕ್ಯ ಹೋರಾಟ ಸಮಿತಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತರ ಮಹಾ ಪಂಚಾಯತ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಿಮ್ಮ ಸಾಲ ಮನ್ನಾ ರೈತರಿಗೆ ಅಗತ್ಯವಿಲ್ಲ. ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಕೊಡಿ. ನಿಮ್ಮ ಸಾಲ ಮರುಪಾವತಿ ಮಾಡುವ ಹೊಣೆ ರೈತನದ್ದಾಗಿದೆ. ಗುತ್ತಿಗೆ ಕೃಷಿ ಪದ್ಧತಿ, ಅಗತ್ಯ ವಸ್ತುಗಳ ನಿಯಂತ್ರಣ ಕಾನೂನು ಇವುಗಳೆಲ್ಲ ರೈತರಿಗೆ ಮಾರಕವಾಗಿವೆ. ರೈತ ಹೋರಾಟ ಕುರಿತಾಗಿ ಪಂಡಿತಾರಾಧ್ಯ ಶ್ರೀ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನುಳಿದ ಮಠಾಧೀಶರು ಮೌನವಹಿಸಿರುವುದು ರೈತರ ಸಂಶಯಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಠಗಳು ಯಾರ ಪರ ಎಂಬುದರ ಬಗ್ಗೆ ರೈತರು ಚಿಂತನೆ ಮಾಡಬೇಕಾಗುತ್ತದೆ ಎಂದರು.
ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರಾಜ್ಯದಲ್ಲಿ 13 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗದೆ ವ್ಯತ್ಯಾಸದ ದರ 3,500 ಕೋಟಿಗಳಷ್ಟು ನಷ್ಟವಾಗಿದೆ. ಪ್ರತಿ ವರ್ಷ 1 ಲಕ್ಷ ಕೋಟಿಗಳಷ್ಟು ನಷ್ಟ ಬೆಲೆ ವ್ಯತ್ಯಾಸಗಳಿಂದ ರೈತರಿಗೆ ಆಗುತ್ತಿದೆ. ಇದನ್ನು ತುಂಬಿಕೊಡುವವರು ಯಾರು? ಇದನ್ನು ಲೂಟಿ ಮಾಡುತ್ತಿರುವವರು ಬಂಡವಾಳಶಾಹಿಗಳಲ್ಲವೇ? ಅಂತಹವರಿಗೆ ಮತ್ತೆ ನೀವು ಕಾನೂನು ಮೂಲಕ ರಕ್ಷಣೆ ಕೊಡಲು ಮುಂದಾಗಿದ್ದೀರಿ. ಈ ಕರಾಳ ಕಾಯ್ದೆಗಳಿಂದ ರೈತರ ಸರ್ವನಾಶವಾಗುತ್ತದೆ. ರೈತರ ಬಾಯಿಗೆ ವಿಷ ಹಾಕುವ ನಿರ್ಣಯಕ್ಕೆ ಯಾಕೆ ಮುಂದಾಗಿದ್ದೀರಿ? ತಕ್ಷಣ ರೈತರೊಂದಿಗೆ ಚರ್ಚಿಸಿ ಮೂರು ಕಾಯ್ದೆಗಳನ್ನು ಹಿಂಪಡೆಯಿರಿ. ಟಿಕಾಯತ್ ಅವರ ಹೋರಾಟ ಹತ್ತಿಕ್ಕುವ ಕೆಲಸಕ್ಕೆ ಮುಂದಾದರೆ ನಾವು ಸುಮ್ಮನಿರುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನ ಹೇಳಿದಂತೆ 1 ಲಕ್ಷ ರೈತರ ಸಾಲ ಮನ್ನಾ ಮಾಡಲಿ ಎಂದರು.
ಕೃಷಿ ಕ್ಷೇತ್ರ ಕಪಿಮುಷ್ಟಿಗೆ ತೆಗೆದುಕೊಳ್ಳುವ ಹುನ್ನಾರ: ರಾಕೇಶ್ ಟಿಕಾಯತ್
ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ ಮಾತನಾಡಿ, ರೈತ ಕುಲಕ್ಕೆ ಧಕ್ಕೆ ಬಂದರೆ ರೈತ ಸೈನಿಕನಾಗುತ್ತಾನೆ. ಮನೆಯಲ್ಲಿ ಹೈನುಗಾರಿಕೆ ಮಾಡಿ ಮಕ್ಕಳಿಗೆ ಹಾಲುಣಿಸಿ ದೊಡ್ಡವರನ್ನಾಗಿ ಮಾಡಿ ಹರಸುವ ತಾಯಿಯೇ ಭಾರತ ಮಾತೆ ಎಂಬುದನ್ನು ಅರಿಯಬೇಕು. ಆಡಳಿತ ನಡೆಸುವವನ ನಕಲಿ ಮಾತು, ವೇಷಧಾರಿಗಳ ವೇಷ, ಮಾತಿನ ಮೋಡಿ ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ. ಅಧಿಕಾರಕ್ಕೆ ಯಾರಿಂದ ಬಂದಿದ್ದೀರಿ? ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಸರ್ಕಾರಗಳು ಕರಾಳ ಕೃಷಿ ಕಾಯ್ದೆ ಮೂಲಕ ರೈತನಿಗೆ ವಿಷವಿಕ್ಕುವ ಕೆಲಸ ಮಾಡುತ್ತಿವೆ. ಸರ್ಕಾರಗಳು ರೈತನ ಆಶಯವನ್ನು ಹುಸಿಗೊಳಿಸಿದ್ದು, ರೈತ ಸಾಲದ ಸುಳಿಯಲ್ಲಿ ಸಿಕ್ಕು ನರಳುವಂತೆ ಮಾಡಿವೆ. ದೇಶವನ್ನು ಸಹ ಸಾಲದ ಶೂಲಕ್ಕೆ ಸಿಲುಕುವಂತೆ ಮಾಡಿದ ಶ್ರೇಯಸ್ಸು ಇಂದಿನ ಕೇಂದ್ರ ಸರ್ಕಾಕ್ಕೆ ಸಲ್ಲುತ್ತದೆ ಎಂದರು.
ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡರಾದ ಶಶಿಕಾಂತ ಪಡಸಲಗಿ, ಚೂನಪ್ಪ ಪೂಜಾರ, ನಂದಿನಿ ಜಯರಾಮ, ಎಚ್.ಆರ್. ಬಸವರಾಜಪ್ಪ, ಪ್ರಶಾಂತ ನಾಯಕ, ವಿಜಯಕುಮಾರ, ಹರಿಯಾಣದ ಬೆಂಪಿ ಪೈಲ್ವಾನ್, ವೀರೇಂದ್ರ ನರ್ವಾಲ, ಇತರರು ಇದ್ದರು.