Asianet Suvarna News Asianet Suvarna News

ಸಾರಿಗೆ ಸಿಬ್ಬಂದಿ ಕೂಗಿಗೆ ದನಿಯಾದ ಕುಟುಂಬಸ್ಥರು

ಮುಂಬರುವ ರಾಜ್ಯ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ನೇತೃತ್ವದಲ್ಲಿ ಸಾರಿಗೆ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

KSRTC staff protest in bengaluru
Author
Bangalore, First Published Jan 28, 2020, 10:33 AM IST

 

ಬೆಂಗಳೂರು(ಜ.28): ಮುಂಬರುವ ರಾಜ್ಯ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ನೇತೃತ್ವದಲ್ಲಿ ಸಾರಿಗೆ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಉಪವಾಸ ಸತ್ಯಾಗ್ರಹದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಸುಮಾರು ಒಂದು ಸಾವಿರ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ನೌಕರರು, ‘ಆಂಧ್ರ ಮಾದರಿಯಲ್ಲಿ ನಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ’, ‘ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ’, ‘ನಮ್ಮ ಹಕ್ಕು ನಮಗೆ ಕೊಡಿ’ ಎಂಬ ಭಿತ್ತಿಫಲಕ ಪ್ರದರ್ಶಿಸಿದರು. ಪುಟಾಣಿ ಮಕ್ಕಳು ‘ನಮ್ಮ ತಂದೆಯನ್ನು ಸರ್ಕಾರಿ ನೌಕರರಾಗಿ ಮಾಡಿ’ ಎಂಬ ಭಿತ್ತಿಫಲಕ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

30ರಂದು ಸಾರಿಗೆ ನೌಕರರ ಪ್ರತಿಭಟನೆ

ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್‌, ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡುವಂತೆ ದಶಕದಿಂದ ಹೋರಾಟಗಳು ನಡೆಯುತ್ತಿವೆ. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದೆ. ರಾಜ್ಯ ಸರ್ಕಾರ ಸಹ ಇದೇ ಮಾದರಿ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರರಾಗಿ ಮಾಡುವ ಸಂಬಂಧ ಅಧ್ಯಯನ ಮಾಡಲು ರಚಿಸಿದ್ದ ಉನ್ನತ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲು ವಿಳಂಬ ಮಾಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಸೊತ್ತು ರಕ್ಷಣೆ ಆಧುನಿಕ ಲಾಕರ್, ಕದಿಯೋಕೆ ಬಂದ್ರೆ ಮೆಸೇಜ್ ಹೋಗುತ್ತೆ

ಅಂತರ್‌ ನಿಗಮ ವರ್ಗಾವಣೆಯಲ್ಲಿ ಬೇರೆ ನಿಗಮಗಳಿಗೆ ವರ್ಗಾವಣೆಗೊಂಡಿರುವ ಸಾಕಷ್ಟುನೌಕರರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ನಡುವೆ ವಾಯವ್ಯ ಸಾರಿಗೆ ನಿಗಮ ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅಂತರ್‌ ನಿಗಮ ವರ್ಗಾವಣೆ ಪೂರ್ಣಗೊಳ್ಳದೇ ಇರುವಾಗ ನೇಮಕಾತಿಗೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಈ ನೇಮಕಾತಿ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ದಾಬಸ್‌ಪೇಟೆಯ ಬಸವರಮಾನಂದ ಸ್ವಾಮೀಜಿ ಹಾಗೂ ಶಿರಸಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸಾರಿಗೆ ನೌಕರರ ಈ ಹೋರಾಟ ಬೆಂಬಲಿಸಿದರು.

ಇಬ್ಬರು ಮಹಿಳೆಯರು ಅಸ್ವಸ್ಥ

ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದವರ ಪೈಕಿ ಇಬ್ಬರು ಮಹಿಳೆಯರು ಉರಿ ಬಿಸಿಲು ಹಾಗೂ ಉಪವಾಸದಿಂದ ಅಸ್ವಸ್ಥರಾಗಿ ನೆಲಕ್ಕೆ ಕುಸಿದು ಬಿದ್ದರು. ಕೂಡಲೇ ಅವರಿಗೆ ಹಣ್ಣಿನ ರಸ ಕುಡಿಸಿ ಆರೈಕೆ ಮಾಡಲಾಯಿತು. ಸಂಜೆ 5 ಗಂಟೆಗೆ ಸಾಂಕೇತಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲಾಯಿತು.

ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸಬೇಕು. ಇಲ್ಲವಾದರೆ, ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಅಧ್ಯಕ್ಷ ಚಂದ್ರಶೇಖರ್‌ ಹೇಳಿದ್ದಾರೆ.

Follow Us:
Download App:
  • android
  • ios