ಗುಡಿಬಂಡೆ[ಸೆ.17]: ಕೊಪ್ಪಳ ಜಿಲ್ಲೆಯ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರ ಪುತ್ರಿ ಮೃತಪಟ್ಟವೇಳೆಯಲ್ಲೂ ಮೇಲಧಿಕಾರಿಗಳು ವಿಷಯ ತಿಳಿಸದೆ ಕರ್ತವ್ಯಕ್ಕೆ ನಿಯೋಜಿಸಿದ ಘಟನೆ ಮರೆಯುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಿಂದ ವರದಿಯಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಚಿಕಿತ್ಸೆಗೆ ಕರೆದೊಯ್ಯಲು ಅಧಿಕಾರಿಗಳು ರಜೆ ನೀಡದ್ದರಿಂದ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದೆ ತಂದೆ ಮೃತಪಟ್ಟಿದ್ದಾರೆ ಎಂದು ಗುಡಿಬಂಡೆ ತಾಲೂಕಿನ ಕೆಎಸ್‌ಆರ್‌ಟಿಸಿ ನೌಕರ, ದಪ್ಪತ್ತಿ ಗ್ರಾಮದ ನಿವಾಸಿ ನರಸಿಂಹಮೂರ್ತಿ ಆರೋಪಿಸಿದ್ದಾರೆ.

ನರಸಿಂಹಮೂರ್ತಿ ಅವರ ತಂದೆ ನರಸಪ್ಪ (68) ಎಂಬವರು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಆರೋಗ್ಯ ತೀವ್ರ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ಯಲು ರಜೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ರಜೆ ನೀಡದೆ ಹೆಚ್ಚುವರಿ ಕೆಲಸ ಹಚ್ಚಿದ್ದರು. ಸರಿಯಾಗಿ ಚಿಕಿತ್ಸೆ ಸಿಗದ್ದರಿಂದ ಭಾನುವಾರ ಅವರು ನಿಧನರಾಗಿದ್ದಾರೆ ಎಂದು ನರಸಿಂಹಮೂರ್ತಿ ಅಳಲು ತೋಡಿಕೊಂಡಿದ್ದಾರೆ.