ಮಂಗಳೂರು(ಆ.03): ಕೆಎಸ್‌ಆರ್‌ಟಿಸಿಯ ಅತ್ಯಾಧುನಿಕ ‘ಅಂಬಾರಿ ಡ್ರೀಮ್‌ ಕ್ಲಾಸ್‌’ ಮಲ್ಟಿಆ್ಯಕ್ಸಿಲ್‌ ಸ್ಲೀಪರ್‌ ಬಸ್‌ ಮಂಗಳೂರಿಗೆ ಆಗಮಿಸಿದೆ. ಸುಮಾರು ಒಂದು ಕೋಟಿ ರು. ವೆಚ್ಚದ ಈ ಬಸ್‌ ಮಂಗಳೂರು-ಪೂನಾ ಮಧ್ಯೆ ಶೀಘ್ರವೇ ಸಂಚಾರಕ್ಕೆ ಇಳಿಯಲಿದೆ.

ಕನಸಿನೊಂದಿಗೆ ಪ್ರಯಾಣ:

ಇದುವರೆಗೆ ‘ಆರಾಮವಾಗಿ ಮಗುವಿನಂತೆ ನಿದ್ರಿಸಿ’ ಎಂಬ ಸ್ಲೋಗನ್‌ನ ಮಲ್ಟಿಆ್ಯಕ್ಸಿಲ್‌ ಕ್ಲಬ್‌ ಕ್ಲಾಸ್‌ ಸೀಟರ್‌ ಬಸ್‌ ಹಾಗೂ ಶೌಚಾಲಯ ಹೊಂದಿರುವ ಫ್ಲೈ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಇನ್ನು ಮುಂದೆ ಅಂಬಾರಿ ಡ್ರೀಮ್‌ ಕ್ಲಾಸ್‌ನಲ್ಲಿ ‘ಕನಸಿನೊಂದಿಗೆ ಪ್ರಯಾಣಿಸುವ’ ಅನುಭವ ಸಿಗಲಿದೆ.

ಬೆಂಗಳೂರು ಹೊರತುಪಡಿಸಿದರೆ, ರಾಜ್ಯದ ಬೇರೆ ಎಲ್ಲಿಯೂ ಮುಂಬಯಿ, ಪೂನಾ, ಚೆನೈ, ಕೊಯಮತ್ತೂರು, ಎರ್ನಾಕುಲಂ ತಿರುಪತಿ, ಹೈದರಾಬಾದ್‌ ಮುಂತಾದ ದೂರದ ಊರುಗಳಿಗೆ ಕೆಎಸ್‌ಆರ್‌ಟಿಸಿ ಮಲ್ಟಿಆ್ಯಕ್ಸಿಲ್‌ ಸ್ಲೀಪರ್‌ ಬಸ್‌ ಸಂಚಾರ ಇಲ್ಲ. ಪ್ರಯಾಣಿಕರು ಮಲ್ಟಿಆ್ಯಕ್ಸಿಲ್‌ ಕ್ಲಬ್‌ ಕ್ಲಾಸ್‌ ಅಥವಾ ಕರೋನಾ ಬಸ್‌ನ್ನು ಮಾತ್ರ ಅವಲಂಬಿಸುತ್ತಿದ್ದರು. ಇದೀಗ ಬೆಂಗಳೂರಿನಿಂದ ಹೊರಗೆ ದೂರ ಸಂಚಾರಕ್ಕೆ ಐಷಾರಾಮಿ ಸ್ಲೀಪರ್‌ ಬಸ್‌ಗಳನ್ನು ಇಳಿಸುತ್ತಿರುವುದು ಇದೇ ಪ್ರಥಮವಾಗಿದೆ. ಈ ಮಾದರಿಯ ಬಸ್‌ಗಳನ್ನು ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಚಾಲನೆಗೊಳಿಸಲಾಗಿತ್ತು.

ಏನಿದರ ವಿಶೇಷತೆ?:

ಮಲ್ಟಿಆ್ಯಕ್ಸಿಲ್‌ ಬಸ್‌ಗಳ ಉದ್ದ 13.7 ಮೀಟರ್‌ ವರೆಗೆ ಇರುತ್ತದೆ. ಆದರೆ ಅಂಬಾರಿ ಡ್ರೀಮ್‌ ಕ್ಲಾಸ್‌ ಬಸ್‌ 14.50 ಮೀಟರ್‌ನಷ್ಟು ವಿಶಾಲವಾಗಿದೆ. ಅಲ್ಲದೆ ಅಂಬಾರಿಗೆ 32 ಸಿಟ್ಟಿಂಗ್‌ ಸೌಲಭ್ಯ ಇದ್ದರೆ, ಡ್ರೀಮ್‌ ಕ್ಲಾಸ್‌ 40 ಸೀಟು ಹೊಂದಿದೆ. ಸುಮಾರು 1.10 ಕೋಟಿ ರು. ವೆಚ್ಚದ ಅಂಬಾರಿ ಡ್ರೀಮ್‌ ಕ್ಲಾಸ್‌ ಎರಡು ಬಸ್‌ಗಳು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಬಂದಿವೆ. ಈ ಬಸ್‌ಗಳು ಶನಿವಾರದಿಂದ ಮಂಗಳೂರು-ಪೂನಾ ಮಧ್ಯೆ ಮೊದಲ ಓಡಾಟ ನಡೆಸಲಿವೆ.

ಕೆಎಸ್‌ಆರ್‌ಟಿಸಿಯ ಇತರೆ ಸ್ಲೀಪರ್‌ ಬಸ್‌ಗಳಿಗಿಂತ ಈ ಬಸ್‌ ಆರಾಮದಾಯಕ ಪ್ರಯಾಣ ಸೌಲಭ್ಯವನ್ನು ಹೊಂದಿದೆ. ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಶನ್ಸ್‌ ಹೊಂದಿದೆ. ನೋಡಲು ಆಕರ್ಷಕ ಹಾಗೂ ಮೋಹಕ ಒಳಾಂಗಣ, ವಿಸ್ತಾರವಾದ ಸ್ಥಳಾವಕಾಶ, ಪ್ರತ್ಯೇಕ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ವಿಹಂಗಮ ನೋಟಕ್ಕೆ ವಿಶಾಲವಾದ ಕಿಟಕಿಗಳು, ಮೇಲ್ಛಾವಣಿ ಕಿಟಕಿ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ತುರ್ತು ನಿರ್ಗಮನ ಬಾಗಿಲುಗಳು, ಅಗ್ನಿ ಅನಾಹುತಗಳನ್ನು ತಪ್ಪಿಸಲು ಫಯರ್‌ ಡಿಟೆಕ್ಷನ್‌ ಮತ್ತು ಸಪ್ರೆಶನ್‌ ಸಿಸ್ಟಂಗಳ ಜೋಡಣೆ, ಶಕ್ತಿಯುತ ಹಾಗೂ ಪರಿಣಾಮಕಾರಿ ಹವಾನಿಯಂತ್ರಕಗಳು(410 ಎಚ್‌ಪಿ) ಇದರ ವಿಶೇಷ.

ಕರಾವಳಿಗೆ ಇನ್ನಷ್ಟುಡ್ರೀಮ್‌ ಕ್ಲಾಸ್‌ ಬಸ್‌:

ಕರಾವಳಿಯಿಂದ ದೂರದ ಊರುಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಇನ್ನೂ ಆರು ಅಂಬಾರಿ ಡ್ರೀಮ್‌ ಕ್ಲಾಸ್‌ ಬಸ್‌ಗಳು ಆಗಮಿಸಲಿದೆ. ಮೊದಲ ಹಂತದಲ್ಲಿ ಎರಡು ಬಸ್‌ಗಳು ಬಂದಿವೆ. ಇನ್ನು ಎರಡು ಹಂತದಲ್ಲಿ ಮೂರು ಬಸ್‌ಗಳು ಆಗಮಿಸಲಿದೆ. ಈ ಬಸ್‌ಗಳನ್ನು ಹೈದರಾಬಾದ್‌, ತಿರುಪತಿ, ಚೆನ್ನೈ, ಮುಂಬೈ, ಎರ್ನಾಕುಲಂಗೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೀಮ್‌ ಕ್ಲಾಸ್‌ ಸಂಚಾರ ಆರಂಭ

ಮಂಗಳೂರು-ಪೂನಾ ಮಧ್ಯೆ ಅಂಬಾರಿ ಡ್ರೀಮ್‌ ಕ್ಲಾಸ್‌ ಮಲ್ಟಿಆ್ಯಕ್ಸಿಲ್‌ ಸ್ಲೀಪರ್‌ ಬಸ್‌ ಆ.3ರಿಂದ ಸಂಚಾರ ಆರಂಭಿಸಲಿದೆ. ಸಂಜೆ 3 ಗಂಟೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಅವರು ಬಿಜೈ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಚಾಲನೆ ನೀಡುವರು. ಇದೇ ವೇಳೆ ಮಂಗಳೂರು-ಕಾಸರಗೋಡು ಮಧ್ಯೆ ವೋಲ್ವೋ ಸಂಚಾರಕ್ಕೂ ಚಾಲನೆ ಸಿಗಲಿದೆ.

ಮಂಗಳೂರು: ನೇತ್ರಾವತಿ ಸೇತುವೆಗೆ ಸಿಸಿ ಟಿವಿ ಅಳವಡಿಕೆ

ಪ್ರತಿದಿನ ಸಂಜೆ 4 ಗಂಟೆಗೆ ಮಂಗಳೂರು ನಿಲ್ದಾಣದಿಂದ ಹೊರಡುವ ಈ ಬಸ್‌ ಮರುದಿನ ಬೆಳಗ್ಗೆ 6.30ಕ್ಕೆ ಪೂನಾ ತಲುಪುತ್ತದೆ. ಅಲ್ಲಿಂದ ದಿನಂಪ್ರತಿ ಸಂಜೆ 6.30ಕ್ಕೆ ಹೊರಟು ಮರುದಿನ ಬೆಳಗ್ಗೆ 7 ಗಂಟೆಗೆ ಮಂಗಳೂರು ತಲುಪಲಿದೆ. ಇದರಲ್ಲಿ ಪ್ರಯಾಣ ದರ 1,350 ರು. ಈ ಬಸ್‌ ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಕೊಲ್ಲಾಪುರ, ಸತಾರ ಮೂಲಕ ಪೂನಾ ತಲುಪಲಿದೆ. ಬಳಿಕ ಇದೇ ಮಾರ್ಗದಲ್ಲಿ ಮಂಗಳೂರಿಗೆ ಸಂಚರಿಸಲಿದೆ.

ನೇತ್ರಾವತಿ ಸೇತುವೆ ಮೇಲೆ ವಾಹನ ಸಂಚಾರ ಅಸ್ತವ್ಯಸ್ತ

ಕಾಸರಗೋಡಿಗೆ ಒಂದೇ ಗಂಟೆಯಲ್ಲಿ ವೋಲ್ವೋ ಸಂಚಾರ

ಮಂಗಳೂರು-ಕಾಸರಗೋಡು ಮಧ್ಯೆ ವೋಲ್ವೋ ಬಸ್‌ ಸಂಚಾರ ಕೂಡ ಶನಿವಾರದಿಂದ ಆರಂಭಗೊಳ್ಳಲಿದೆ. ದಿನದಲ್ಲಿ 14 ಟ್ರಿಪ್‌ ಸಂಚರಿಸಲಿದ್ದು, ಪ್ರಯಾಣ ದರ ಕೇವಲ 75 ರು. ಇರಲಿದೆ. ಮಂಗಳೂರು-ಕಾಸರಗೋಡು ಮಧ್ಯೆ 8 ಕಡೆ ನಿಲುಗಡೆ ಕಲ್ಪಿಸಲಾಗಿದೆ.ಮಾಸಿಕ ಪಾಸ್‌ ಹೊಂದಿದ್ದರೆ, ದಿನದಲ್ಲಿ 130 ರು. ದರದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಹಾಲಿ ಎಕ್ಸ್‌ಪ್ರೆಸ್‌ ಬಸ್‌ಗಳಲ್ಲಿ ಪ್ರಯಾಣ ದರ 56 ರು. ಇದೆ. ಇದಕ್ಕಿಂತ ಸ್ವಲ್ಪ ಮೊತ್ತ ಹೆಚ್ಚು ಇದೆಯಷ್ಟೆ. ಈ ಬಸ್‌ಗೆ ಮಂಗಳೂರಿನಿಂದ ಭಟ್ಕಳಕ್ಕೆ ಸಂಚರಿಸುವ ವೋಲ್ವೋ ಬಸ್‌ಗಳ ಲಿಂಕ್‌ ಇರುತ್ತದೆ ಎಂದು ವಿಭಾಗೀಯ ಸಂಚಾರ ನಿಯಂತ್ರಕ ಜೈಶಾಂತ್‌ ತಿಳಿಸಿದ್ದಾರೆ.

-ಆತ್ಮಭೂಷಣ್‌ ಮಂಗಳೂರು