ಚಾಮರಾಜನಗರ (ಡಿ.09):  ಭಾರತ ಬಂದ್‌ನಿಂದಾಗಿ ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಬಸ್‌ ಸಂಚಾರ ಸಾಮಾನ್ಯವಾಗಿತ್ತು. ಆದರೆ, ಚಾಮರಾಜನಗರದಿಂದ ಬೇರೆಡೆಗೆ ತೆರಳುವ 150ಕ್ಕೂ ಹೆಚ್ಚು ಬಸ್‌ಗಳು ತೆರಳದೇ ಇರುವುದರಿಂದ 20 ಲಕ್ಷ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ತಿಳಿಸಿದರು.

ಬಸ್‌ ಸಿಗದೇ ಬೆಳಗ್ಗೆಯಿಂದ ಪರಿತಪಿಸಿದ ಕೆಲವರು ರೈಲು ಹಾದಿಯನ್ನು ಹಿಡಿದು ಮೈಸೂರು, ಮಂಡ್ಯ, ಬೆಂಗಳೂರಿಗೆ ತೆರಳಿದರು. ಸೋಮವಾರದಿಂದ ಆರಂಭವಾದ ತಿರುಪತಿ- ಚಾಮರಾಜನಗರ ಎಕ್ಸ್‌ಪ್ರೆಸ್‌ ರೈಲು ಮೊದಲ ದಿನ ಖಾಲಿ ಹೊರಟಿದ್ದರೇ ಎರಡನೇ ದಿನ ಬಂದ್‌ ಎಫೆಕ್ಟ್ ನಿಂದಾಗಿ ರೈಲಿನಲ್ಲಿ ಜನ ಸಂಚಾರ ಹೆಚ್ಚಾಗಿತ್ತು.

ಸ್ಮಾರ್ಟ್‌ ಕ್ಲಾಸ್‌ ಆಗಲಿದೆ ಕೆಎಸ್‌ಆರ್‌ಟಿಸಿ ‘ಸ್ಕ್ರಾಪ್‌ ಬಸ್‌’! ...

ಕೆಲವರು ಬೆಳಗ್ಗೆ 8ರಿಂದ ಬಸ್‌ಗಾಗಿ ಕಾದುಕಾದು ರೋಸಿಹೋಗಿ ಅನ್ಯ ಮಾರ್ಗವಿಲ್ಲದೇ ರೈಲಿನ ಮೊರೆ ಹೋಗಿದ್ದರೇ ಕೆಲವರು ಬಂದ್‌ ಮುನ್ನೆಚ್ಚರಿಕೆ ಅರಿತು ಮೊದಲೇ ಟಿಕೆಟ್‌ ಬುಕ್‌ ಮಾಡಿದ್ದು ಕಂಡು ಬಂದಿತು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್‌ ಧಾರಣೆ ಕುರಿತು ಆರ್‌ಪಿಎಫ್‌ ಪೊಲೀಸರು ಕಟ್ಟುನಿಟ್ಟಿನ ಸೂಚನೆ ಕೊಟ್ಟು ಕೋವಿಡ್‌ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

ಬುಧವಾರದಿಂದ ಇನ್ನೊಂದು ರೈಲು:  ಸೋಮವಾರದಿಂದ ತಿರುಪತಿ ಎಕ್ಸ್‌ಪ್ರೆಸ್‌ ಆರಂಭವಾದ ಬೆನ್ನಲ್ಲೇ ಇಂದಿನಿಂದ ಸಂಜೆ 5ಕ್ಕೆ ಪ್ಯಾಸೆಂಜರ್‌ ರೈಲು ಆರಂಭವಾಗಲಿದ್ದು, ಮಾಸಿಕ ಪಾಸ್‌ ಸೌಲಭ್ಯ ಇರುವುದಿಲ್ಲ ಆದರೆ, ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.