ಬೆಂಗಳೂರು(ಜು. 02) ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರರಾಗಿದ್ದ ಮಂಡ್ಯದ ಕಾಮೇಗೌಡರಿಗೆ ಕೆಎಸ್‌ಆರ್‌ಟಿಸಿ ಕೊಡುಗೆಯೊಂದನ್ನು ನೀಡಿದೆ.  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ವೇಗದೂತ, ರಾಜಹಂಸ,ವೋಲ್ವೋ ಸಹಿತ ಎಲ್ಲಾ ಬಗೆಯ ಬಸ್ ಗಳಲ್ಲಿ ಪ್ರಯಾಣಿಸಲು ಕಾಮೇಗೌಡರಿಗೆ ಜೀವಿತಾವಧಿವರಗೆ ಉಚಿತ್ ಬಸ್ ಪಾಸ್ ನೀಡಿದೆ.

ರಾಜ್ಯೋತ್ಸವ ಪುರಸ್ಕೃತ ಕಾಮೇಗೌಡರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಅನಕ್ಷರಸ್ಥರಾಗಿದ್ದರೂ ಇವರು ಮಾಡಿರುವ ಕೆಲಸಕ್ಕೆ ಇಂದು ಇಡೀ ದೇಶವೇ ಭೇಷ್ ಎಂದಿದೆ.  ತಮ್ಮ ಗ್ರಾಮದ ಪಕ್ಕದಲ್ಲಿರುವ ಕುಂದೂರು ಬೆಟ್ಟದಲ್ಲಿ ಸುಮಾರು ‌16 ಕೆರೆಗಳನ್ನು  ಸ್ವಂತ ದುಡಿಮೆಯ ಹಣದಲ್ಲಿ ನಿರ್ಮಿಸಿದ್ದಾರೆ. ತಮ್ಮ ಪರಿಸರ ಪ್ರೀತಿಯಿಂದಲೇ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.

ಕಾಮೇಗೌಡರ ಜೀವನ ಸಾಧನೆ ಅರಿಯಲೆ ಬೇಕು

ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ಕಾಮೇಗೌಡರ ಪರಿಸರ ಪ್ರೇಮ ಶ್ಲಾಘಿಸಿದ್ದರು.  ತುಂಡು ಭೂಮಿ, ಒಂದಷ್ಟು ಕುರಿಗುಳು ಇವಿಷ್ಟೇ ದಾಸನದೊಡ್ಡಿಯ ಕುರಿಗಾಹಿ 83 ವರ್ಷದ ಕಾಮೇಗೌಡರ ಆಸ್ತಿ. ಬಾಲ್ಯದಿಂದಲೂ ನಿಸರ್ಗದೊಂದಿಗೆ ಸ್ನೇಹ ಬೆಳೆಸಿಕೊಂಡಿರುವ ಕಾಮೇಗೌಡರು ತನ್ನ ಹಾಗೂ ಪ್ರಕೃತಿ ಮಾತೆಯ ಸ್ನೇಹಕ್ಕಾಗಿ ದುಡಿದ ಹಣವನ್ನೆಲ್ಲಾ ಖರ್ಚು ಮಾಡಿದ್ದಾರೆ. ಈವರೆಗೆ 16 ಕೆರೆಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿ ಮನುಕುಲಕ್ಕೆ ಜಲ ಪಿತಾಮಹರಾಗಿದ್ದಾರೆ.

ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ.

ಮಾಧ್ಯಮವೊಂದರಲ್ಲಿ ಈ ಬಗ್ಗೆ ತಮ್ಮ ಆಸೆ ವ್ಯಕ್ತಪಡಿಸಿದ್ದ ಕಾಮೇಗೌಡರ ಅಭಿಲಾಷೆಯಂತೆ, ಉಚಿತ ಪಾಸ್ ವಿತರಿಸಲು  ಮುಖ್ಯಮಂತ್ರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು.