ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.22): ಸರ್ಕಾರ ನೆರವು ನೀಡಿದರೆ ಮಾತ್ರ ಈ ಸಲ ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ ನೌಕರರಿಗೆ ಏಪ್ರಿಲ್‌ ತಿಂಗಳ ಸಂಬಳ ದೊರೆಯಲಿದೆ. ಇಲ್ಲದಿದ್ದಲ್ಲಿ ತಣ್ಣೀರು ಬಟ್ಟೆಯೇ ಗತಿ!

ಹೌದು! ದೇಶಾದ್ಯಂತ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದರಿಂದಾಗಿ ವಾಯವ್ಯ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಈ ಕಾರಣದಿಂದಾಗಿ ಸಂಸ್ಥೆಯ ಆದಾಯದಲ್ಲಿ ಖೋತಾ ಆಗಿದೆ. ಇದ್ದುದ್ದರಲ್ಲಿ ಅಡ್ಜೆಸ್ಟ್‌ ಮಾಡಿ ಮಾರ್ಚ್‌ ತಿಂಗಳ ಸಂಬಳವನ್ನು ಸಂಸ್ಥೆ ನೀಡಿದೆ. ಇದೀಗ ಏಪ್ರಿಲ್‌ ತಿಂಗಳ ಸಂಬಳ ನೀಡಲು ಸರ್ಕಾರದ ನೆರವು ಅನಿವಾರ್ಯ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯೂ ನಾಲ್ಕು ನಿಗಮಗಳನ್ನೊಳಗೊಂಡು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.

ಯೋಗ ಮಾಡಿ ಮೋದಿ ಗಮನ ಸೆಳೆದ ಬಾಲಕಿ: ಹುಬ್ಬಳ್ಳಿ ಹುಡುಗಿ ಇಫ್ರಾಗೆ ಭೇಷ್‌ ಎಂದ ಪ್ರಧಾನಿ..!

ನೌಕರರೆಷ್ಟು; ಸಂಬಳವೆಷ್ಟು?

ಶಿರಸಿ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ನಗರ ಸಾರಿಗೆ ಹೀಗೆ 6 ಜಿಲ್ಲೆಗಳ 9 ವಿಭಾಗಗಳನ್ನೊಳಗೊಂಡ ದೊಡ್ಡ ನಿಗಮ ಇದಾಗಿದೆ. ಎಲ್ಲ ವಿಭಾಗ ಸೇರಿ ಒಟ್ಟು 23,250 ಜನ ನೌಕರರು ಕೆಲಸ ಮಾಡುತ್ತಾರೆ. ಇದರಲ್ಲಿ 16 ಸಾವಿರ ಚಾಲಕ ಹಾಗೂ ನಿರ್ವಾಹಕರಿದ್ದರೆ, ಉಳಿದವರು ಅಧಿಕಾರಿ ವರ್ಗ, ಡಿ-ಗ್ರೂಪ್‌ ನೌಕರರು, ಮೆಕ್ಯಾನಿಕ್‌ ಇತರರು ಇದ್ದಾರೆ. ಈ ಎಲ್ಲರಿಗೂ ಸಂಬಳ ನೀಡಬೇಕೆಂದರೆ 70 ಕೋಟಿ ಬೇಕಾಗುತ್ತದೆ.

ಈ ಸಂಸ್ಥೆಯ ಬಸ್‌ಗಳ ಒಂದು ದಿನ ಕಾರ್ಯಾಚರಣೆ ಸ್ಥಗಿತವಾದರೆ  5ರಿಂದ 6 ಕೋಟಿ ನಷ್ಟವಾಗುತ್ತದೆ. ಮಾ. 22ರಿಂದ ಸಂಪೂರ್ಣ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಲ್ಲಿಂದ ಮೇ 3ರ ವರೆಗೆ ಬಸ್‌ ಸಂಚರಿಸುವುದೇ ಇಲ್ಲ. ಮೇ 3ರ ವರೆಗೆ ಅಂದರೆ 43 ದಿನ ಬಸ್‌ ಕಾರ್ಯಾಚರಣೆಗೆ ಇಳಿಯುವುದೇ ಇಲ್ಲ. ಇದರಿಂದಾಗಿ 258 ಕೋಟಿಗೂ ಅಧಿಕ ಆದಾಯದಲ್ಲಿ ಖೋತಾ ಆಗಲಿದೆ. ಈಗಿನ ಅಂದಾಜಿನಂತೆ ಮೇ 3ಕ್ಕೆ ಲಾಕ್‌ಡೌನ್‌ ಮುಕ್ತಾಯವಾಗಲಿದೆ. ಒಂದು ವೇಳೆ ಮತ್ತೆ ಲಾಕ್‌ಡೌನ್‌ ಮುಂದುವರಿದರೆ ಮತ್ತೂ ಬಸ್‌ ಸಂಚರಿಸುವುದಿಲ್ಲ. ಆಗ ಮತ್ತಷ್ಟು ಆದಾಯಕ್ಕೆ ಖೋತಾ ಆಗಲಿದೆ. ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ದಿನ ಒಂದೇ ಒಂದು ಬಸ್‌ ಕಾರ್ಯಾಚರಣೆಗೆ ಇಳಿಯದೇ ಇರುವುದು ಇದೇ ಮೊದಲು.

ಸರ್ಕಾರಕ್ಕೆ ಪ್ರಸ್ತಾವನೆ?

ಮೊದಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಷ್ಟದಲ್ಲಿದೆ. ಇಂತಹದ್ದರಲ್ಲಿ ಇದೀಗ ಕೊರೋನಾದಿಂದಾಗಿ ಮತ್ತಷ್ಟುಆದಾಯಕ್ಕೆ ಖೋತಾ ಆಗಿದೆ. ಕಳೆದ ತಿಂಗಳು ಮಾರ್ಚ್‌ ತಿಂಗಳಲ್ಲಿ ನಿಗಮವೇ ಅಡ್ಜೆಸ್ಟ್‌ ಮಾಡಿ ತನ್ನ ನೌಕರರ ಸಂಬಳ ನೀಡಿದೆ. ಏಪ್ರಿಲ್‌ ತಿಂಗಳಲ್ಲಿ ಒಂದೇ ಒಂದು ಬಸ್‌ ಸಂಚರಿಸದ ಕಾರಣ ಸಂಬಳ ನೀಡುವುದಕ್ಕೂ ದುಡ್ಡು ಇಲ್ಲದಂತಾಗಿದೆ. ಸರ್ಕಾರಕ್ಕೆ ಈ ಸಂಬಂಧ ನಿಗಮದ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ದುಡ್ಡು ಬಂದರೆ ಮಾತ್ರ ನೌಕರರಿಗೆ ಸಮಬಳ ನೀಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇಲ್ಲ.

ಒಟ್ಟಿನಲ್ಲಿ ಕೊರೋನಾದಿಂದಾಗಿ ಸಾರಿಗೆ ಸಂಸ್ಥೆಗೆ ಆದಾಯದಲ್ಲಿ ಸಾಕಷ್ಟುಖೋತಾ ಆಗಿದ್ದು, ಸಿಬ್ಬಂದಿ ಸಂಬಳಕ್ಕೂ ಸಮಸ್ಯೆ ಎದುರಿಸುವಂತಾಗಿರುವುದಂತೂ ಸತ್ಯ. ಸರ್ಕಾರ ಸಾರಿಗೆ ಸಂಸ್ಥೆಯ ಪ್ರಸ್ತಾವನೆಗೆ ಸ್ಪಂದಿಸಿ ಹಣ ಬಿಡುಗಡೆ ಮಾಡುವುದು ಅನಿವಾರ್ಯವಿದೆ.

ಈ ವರೆಗೆ ನೌಕರರ ಸಂಬಳ ನೀಡಲು ಸಮಸ್ಯೆಯಾಗಲ್ಲ. ಈಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮದಷ್ಟೇ ಅಲ್ಲ. ನಾಲ್ಕು ನಿಗಮಗಳನ್ನೊಳಗೊಂಡಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಹೇಳಿದ್ದಾರೆ.