ಉಡುಪಿ ಜಿಲ್ಲೆ ಹಸಿರು ವಲಯವಾಗಿದ್ದು, ಲಾಕ್‌ಡೌನ್‌ ಇನ್ನಷ್ಟುಸಡಿಲಿಕೆ ಮಾಡಿ ಬಸ್‌ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಲು ಉದ್ದೇಶಿಸಿದೆ. ಅದಕ್ಕಾಗಿ ಬುಧವಾರ ಖಾಸಗಿ ಬಸ್‌ಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ.

ಉಡುಪಿ(ಮೇ.07): ಉಡುಪಿ ಜಿಲ್ಲೆ ಹಸಿರು ವಲಯವಾಗಿದ್ದು, ಲಾಕ್‌ಡೌನ್‌ ಇನ್ನಷ್ಟುಸಡಿಲಿಕೆ ಮಾಡಿ ಬಸ್‌ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಲು ಉದ್ದೇಶಿಸಿದೆ. ಅದಕ್ಕಾಗಿ ಬುಧವಾರ ಖಾಸಗಿ ಬಸ್‌ಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದರು.

ಆದರೆ ಕೊರೋನಾ ತಡೆಯಲು ಜಿಲ್ಲಾಡಳಿತ ಸೂಚಿಸಿದ ಕ್ರಮಗಳಿಗೆ ಬಸ್‌ ಮಾಲೀಕರು ಒಪ್ಪದಿದ್ದುದರಿಂದ ಖಾಸಗಿ ಬಸ್‌ಗಳ ಸಂಚಾರ ಸದ್ಯಕ್ಕೆ ಆರಂಭವಾಗುತ್ತಿಲ್ಲ. ತಲಾ ಬಸ್‌ಗಳಲ್ಲಿ ಕೇವಲ ಶೇ.50ರಷ್ಟುಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿ, ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಜಿಲ್ಲಾಧಿಕಾರಿ ಸೂಚನೆಗೆ ಖಾಸಗಿ ಬಸ್‌ ಮಾಲೀಕರು ಒಪ್ಪಲಿಲ್ಲ. ಶೇ.80ರಷ್ಟಾದರೂ ಪ್ರಯಾಣಿಕರನ್ನು ತುಂಬಿಸುವುದಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಮಂಗಳೂರಲ್ಲಿ ಹೆಚ್ಚಿದ ಕೊರೋನಾತಂಕ: ಊರಿಗೆ ಕಳುಹಿಸುವಂತೆ ಕಾರ್ಮಿಕರ ಪ್ರತಿಭಟನೆ

ಅಲ್ಲದೇ ಬಸ್‌ ದರವನ್ನೂ ಹೆಚ್ಚಿಸಬೇಕು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಸ್‌ಗಳನ್ನು ಸ್ಥಗಿತಗೊಳಿಸಿ ತಾವೆಲ್ಲರೂ ನಷ್ಟದಲ್ಲಿದ್ದೇವೆ. ಆದ್ದರಿಂದ ಬಸ್‌ ತೆರಿಗೆಯನ್ನು ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು. ಮಾಲೀಕರ ಈ ಬೇಡಿಕೆಗಳನ್ನು ಸರ್ಕಾರ ಮಟ್ಟದಲ್ಲಿ ತೀರ್ಮಾನಿಸಬೇಕಾಗಿರುವುದರಿಂದ, ಸಾರಿಗೆ ಸಚಿವರ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿ ಸಭೆ ಮುಗಿಸಿದರು.

ನಾಳೆಯಿಂದ ಸರ್ಕಾರಿ ಬಸ್‌ ಆರಂಭ

ಜಿಲ್ಲೆಯ ಹೆಚ್ಚಿನ ಸರ್ಕಾರಿ ಉದ್ಯೋಗಿಗಳು ಕಚೇರಿಗೆ ತೆರಳಲು ಖಾಸಗಿ ಬಸ್‌ಗಳನ್ನೇ ಅವಲಂಬಿಸಿರುವುದರಿಂದ, ಪ್ರಸ್ತುತ 40 ದಿನಗಳಿಂದ ಬಸ್‌ಗಳಿಲ್ಲದೆ ಅವರು ಕಚೇರಿಗೆ ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಅನುಕೂಲವಾಗುವಂತೆ ಶುಕ್ರವಾರದಿಂದ ಸರ್ಕಾರಿ ಬಸ್‌ಗಳನ್ನು ಓಡಿಸುವ ಬಗ್ಗೆ ಜಿಲ್ಲಾಡಳಿತ ದಿಟ್ಟತೀರ್ಮಾನ ತೆಗೆದುಕೊಂಡಿದೆ.

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯೇ ಕೊರೋನಾ ಹಾಟ್‍ಸ್ಪಾಟ್: ಅಚ್ಚರಿಯಾದ್ರೂ ಸತ್ಯ

ಬೆಳಿಗ್ಗೆ ಒಂದು ನಿರ್ದಿಷ್ಟಸಮಯದಲ್ಲಿ ನಿರ್ದಿಷ್ಟಸ್ಥಳಕ್ಕೆ ಸರ್ಕಾರಿ ಉದ್ಯೋಗಿಗಳನ್ನು ಹತ್ತಿಸಿ, ಸಂಜೆ ನಿರ್ದಿಷ್ಟಸಮಯಕ್ಕೆ ಅವರನ್ನು ಹಿಂದಕ್ಕೆ ಬಿಡುವ ಬಗ್ಗೆ ನಿರ್ಧರಿಸಲಾಗಿದ್ದು, ನಾಳೆಯಿಂದ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.