ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯೇ ಕೊರೋನಾ ಹಾಟ್‍ಸ್ಪಾಟ್: ಅಚ್ಚರಿಯಾದ್ರೂ ಸತ್ಯ
ಜನರು ತಮ್ಮ ರೋಗವನ್ನು ನಿವಾರಣೆಯಾಗಲೆಂದು ಆಸ್ಪತ್ರೆಗಳಿಗೆ ಬರುತ್ತಾರೆ. ಆದ್ರೆ, ಆಸ್ಪತ್ರೆಯಿಂದಲೇ ಕೊರೋನಾ ಹರಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದು ಅಚ್ಚರಿ ಎನಿಸಿದರೂ ಸತ್ಯ.
ಮಂಗಳೂರು, (ಮೇ.6): ಫಸ್ಟ್ ನ್ಯೂರೋ ಆಸ್ಪತ್ರೆಯೇ ದಕ್ಷಿಣ ಕನ್ನಡದ ಪಾಲಿಗೆ ಕೊರೋನಾ ವಾಹಕ ಆಗಿ ಪರಿವರ್ತನೆಗೊಂಡಿದೆ.
ಮಂಗಳೂರು ಹೊರವಲಯದ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದುವರೆಗೆ ಬರೋಬ್ಬರಿ ಹತ್ತು ಮಂದಿ ಕೋರೋನಾ ಪೀಡಿತರಾಗಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ.
ಈ ಆಸ್ಪತ್ರೆ ಕೇಂದ್ರಿತವಾಗಿ ಸೋಂಕು ಇನ್ನಷ್ಟು ವ್ಯಾಪಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಪ್ರಕರಣ ಇಷ್ಟು ಗಂಭೀರವಾಗಿದ್ದರೂ ಸೋಂಕಿನ ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಆಸ್ಪತ್ರೆಯ ಕುರಿತಾಗಿನ ಆಡಳಿತದ ಮೃದು ನಡೆ ಹಲವು ಅನುಮಾನಗಳಿಗೂ ಆಸ್ಪದ ನೀಡಿದೆ.
ಮೂವರು ಮೃತಪಟ್ಟ ದಕ್ಷಿಣ ಕನ್ನಡದಲ್ಲಿ ಮತ್ತೆರಡು ಪಾಸಿಟಿವ್..!
ಈ ಆಸ್ಪತ್ರೆಯ ಮೂಲದಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಇಲ್ಲಿ ಕಂಡುಬಂದ ಮೊದಲ ಸೋಂಕಿತ ವ್ಯಕ್ತಿಗೆ ಸೋಂಕು ಹೇಗೆ ತಗುಲಿತು ಎಂದರೆ ಯಾವೊಬ್ಬ ಅಧಿಕಾರಿ ಬಳಿಯೂ ಉತ್ತರವಿಲ್ಲ.
ಸೋಂಕಿನ ಮೂಲ ಕಂಡುಹಿಡಿದರೆ ಕನಿಷ್ಠ ಆಯಾ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲು ಸಾಧ್ಯ. ಆದರೆ ಈ ಪ್ರಕರಣದಲ್ಲಿ ಮಾತ್ರ ಇದ್ಯಾವುದೂ ಆಗದೆ ಕೊರೋನಾ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಏಳೆಂಟು ವೈದ್ಯಕೀಯ ಕಾಲೇಜುಗಳು, ಸುಧಾರಿತ ಆರೋಗ್ಯ- ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಹೆಗ್ಗಳಿಕೆಯ ಮಂಗಳೂರಿಗೆ ಸೋಂಕಿನ ಮೂಲ ಕಂಡುಹಿಡಿಯಲು ಆಗದೆ ಇರುವುದು ಕಪ್ಪು ಚುಕ್ಕೆಯಾಗಿರುವುದು ಮಾತ್ರವಲ್ಲ, ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸಾಮಾಜಿಕ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಂದಲೇ ಶೇ.50ಕ್ಕೂ ಹೆಚ್ಚು ಪ್ರಕರಣಗಳು!:
ದಕ್ಷಿಣ ಕನ್ನಡದಲ್ಲಿ ಇದುವರೆಗೆ ದಾಖಲಾದ ಒಟ್ಟು 24 ಕೊರೋನಾ ಪ್ರಕರಣಗಳಲ್ಲಿ ಹೊರಜಿಲ್ಲೆಗಳ 6 ಪ್ರಕರಣಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಶೇ. 50ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು ಫಸ್ಟ್ ನ್ಯೂರೊ ಆಸ್ಪತ್ರೆ ಮೂಲದಿಂದ. ಸೋಂಕಿನ ಸುಳಿವೆ ಇಲ್ಲದೆ ಏ.19ರಂದು ಬಂಟ್ವಾಳದ ಮಹಿಳೆಯ ಸಾವು ಸಂಭವಿಸಿತ್ತು.
ಕಷ್ಟದಲ್ಲಿರುವವರಿಗೆ BSY ಸಹಾಯಧನ, ಕೋಟಿಗೊಬ್ಬ ಹಾಡು ಮೆಚ್ಚಿನ ಜನ: ಮೇ.06ರ ಟಾಪ್ 10 ಸುದ್ದಿ!
ಅದಾದ ಬಳಿಕ ಅವರ ಅತ್ತೆಯೂ ಸೋಂಕಿನಿಂದ ಮೃತಪಟ್ಟರು. ನಂತರ ಇದೇ ಆಸ್ಪತ್ರೆ ಮೂಲದಿಂದ ಸೋಂಕಿತರಾದ ಬಂಟ್ವಾಳದ ಮತ್ತೋರ್ವ ಮಹಿಳೆಯೂ ಸಾವಿಗೀಡಾದರು. ಆಗಲೇ ಸೋಂಕು ಮೂಲ ಪತ್ತೆ ಹಚ್ಚಿರುತ್ತಿದ್ದರೆ ರೋಗ ವ್ಯಾಪಿಸುವುದನ್ನು ತಪ್ಪಿಸಬಹುದಿತ್ತು. ಮೊದಲ ಪ್ರಕರಣ ದಾಖಲಾಗಿ ಎರಡು ವಾರಗಳೇ ಕಳೆದರೂ ನಿಗೂಢವಾಗಿಯೇ ಉಳಿದಿದೆ. ಅಥವಾ ಅದನ್ನು ನಿಗೂಢವಾಗಿ ಉಳಿಸಲಾಗಿದೆಯೇ ಎನ್ನುವ ಅನುಮಾನಗಳೂ ಜಾಲತಾಣಗಳಲ್ಲಿ ವ್ಯಕ್ತ ವಾಗುತ್ತಿವೆ.
ಮೈಸೂರಿನ ಜ್ಯುಬಿಲಿಯೆಂಟ್ ನ ಮೊದಲ ವ್ಯಕ್ತಿಗೆ ಸೋಂಕು ತಗುಲಿದ್ದ ಮೂಲ ಕಂಡುಹಿಡಿಯಲು ಸರ್ಕಾರ ಐಎಎಸ್ ಅಧಿಕಾರಿಯನ್ನೇ ನೇಮಕ ಮಾಡಿದೆ. ದ.ಕ.ದಲ್ಲಿ ನಾಲ್ಕೈದು ಐಎಎಸ್ ಅಧಿಕಾರಿಗಳು, 7 ಐಪಿಎಸ್ ಅಧಿಕಾರಿಗಳಿದ್ದರೂ ಏನೂ ಪ್ರಯೋಜನವಾಗಿಲ್ಲ. ಇದರ ತನಿಖೆಗೂ ಯಾವ ಆದೇಶವೂ ಆಗಿಲ್ಲ.
ಆಸ್ಪತ್ರೆ ವಿರುದ್ಧ ಕ್ರಮ ಇಲ್ಲ!:
ಬಂಟ್ವಾಳ ಕೆಳ ಪೇಟೆಯ ಮೊದಲ ಪ್ರಕರಣದ ಮಹಿಳೆ ಸೋಂಕಿನ ಲಕ್ಷಣ ಕಂಡು ಬಂದ ಬಳಿಕ ಸ್ಥಳೀಯ ವೈದ್ಯರೊಬ್ಬರಲ್ಲಿ ಚಿಕಿತ್ಸೆ ಪಡೆದಿದ್ದರು. ಮಾಹಿತಿ ನೀಡದೆ ಇದ್ದ ಕಾರಣಕ್ಕೆ ಆ ವೈದ್ಯರ ಮೇಲೆ ಆಡಳಿತ ಕೇಸು ಹಾಕಿದೆ. ಆದರೆ 14 ಮಂದಿಗೆ ಸೋಂಕು ಹರಡಲು ಕಾರಣವಾದ ಪಡೀಲಿನ ಆಸ್ಪತ್ರೆ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದೆ ಜಿಲ್ಲಾಡಳಿತ ಮೃದು ಧೋರಣೆ ತಾಳಿದೆ. ರಾಜಕೀಯ ಒತ್ತಡವೂ ಕಾರಣ ಎನ್ನಲಾಗುತ್ತಿದೆ.
ಬಂಟ್ವಾಳ ಕೆಳಪೇಟೆಯ ಮೊದಲ ಸೋಂಕಿತೆಯ (ಮೊದಲ ಬಲಿ) ಮಗ ಕೆಲ ವಾರಗಳ ಹಿಂದಷ್ಟೆ ವಿದೇಶದಿಂದ ಆಗಮಿಸಿದ್ದರೂ ಜಿಲ್ಲಾಡಳಿತಕ್ಕೆ ಈ ಮಾಹಿತಿ ಇರಲಿಲ್ಲ. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಲ್ಲೂ ಮಾಹಿತಿ ಇರಲಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರದ ದಿನಗಳಲ್ಲಿ ಸೋಂಕಿತೆಯ ಪುತ್ರ, ಪತಿಯನ್ನು ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿತ್ತು. ಹಾಗಾದರೆ ಸೋಂಕು ಬಂದದ್ದು ಹೇಗೆ? ಸೋಂಕಿತೆಯ ಅತ್ತೆ ಫಸ್ಟ್ ನ್ಯೂರೊ ಆಸ್ಪತ್ರೆ ದಾಖಲಾಗಿದ್ದರಿಂದ ಅವರನ್ನು ನೋಡಿಕೊಳ್ಳಲು ಇವರು ಹೋಗುತ್ತಿದ್ದರು. ಆಸ್ಪತ್ರೆಯಿಂದಲೇ ಹರಡಿತೇ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.