ಸಕಲೇಶಪುರ (ಅ.13):  ಬಸ್‌ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿರುವ ಘಟನೆ ತಾಲೂಕಿನಲ್ಲಿ ಸೋಮವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ಗುಲಗಳಲೆ ಹಾಗೂ ಒಸ್ಸೂರು ಗ್ರಾಮ ಸಮೀಪ ಸಕಲೇಶಪುರದ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ರಾಟೆಮನೆಯಿಂದ ಮುಂದೆ ತಿರುವಿನಲ್ಲಿ ಹಾಸನದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ರಸ್ತೆಯ ಇನ್ನೊಂದು ಬದಿಗೆ ಬಂದಿದೆ. ಇನ್ನೇನು ಬಸ್‌ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಬೇಕು ಎನ್ನುವಷ್ಟರಲ್ಲಿ ಬಸ್‌ ಚಾಲಕ ಗುರು ಬಸ್ಸನ್ನು ರಸ್ತೆಯಿಂದ ಕೆಳಗೆ ಇಳಿಸಿದ್ದಾನೆ. ಆದರೂ ಬಸ್‌ಗೆ ಲಾರಿ ಉಜ್ಜಿಕೊಂಡು ರಸ್ತೆ ಬದಿ ಇದ್ದ ಗುಂಡಿಗೆ ಬಿದ್ದಿದೆ. ಇದರಿಂದ ಭಾರೀ ಅಪಘಾತ ತಪ್ಪಿದೆ. ಬಸ್‌ ರಸ್ತೆ ಬದಿ ವಾಲಿದೆ.

ಮಗು ಅಪಹರಿಸಿ ರೇಪ್‌ ಮಾಡಿದ ವಿಕೃತ ಕಾಮುಕನಿಗೆ ಗುಂಡು ...

ಬಸ್‌ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಇದರಲ್ಲಿ ನಾಲ್ವರು ಗಾಯಗೊಂಡ ಹಿನ್ನೆಲೆಯಲ್ಲಿ ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಸ್‌ ಚಾಲಕ ಯಾವುದೆ ಅಪಾಯವಿಲ್ಲದೆ ಪಾರಾಗಿದ್ದು, ಆತನ ಸಮಯಪ್ರಜ್ಞೆಯಿಂದ ಸಂಭವನೀಯ ದೊಡ್ಡ ಅಪಘಾತ ತಪ್ಪಿದೆ. ಲಾರಿ ಚಾಲಕ ವಿಜಯ್‌ ಕುಮಾರ್‌ ಎಂಬುವರನ್ನು ನಗರ ಠಾಣೆ ಪೊಲೀಸರು ಬಂ​ಧಿಸಿ ದೂರು ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75 ಹಾಸನ ಸಕಲೇಶಪುರ ನಡುವೆ ಗುಂಡಿಗಳು ಬಿದ್ದಿದ್ದು, ವಾಹನ ಚಾಲಕರು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೆ ಈಡಾಗುತ್ತಿದ್ದಾರೆ ಎಂಬ ಆರೋಪವಿದೆ.

ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರ ಜೀವ ಉಳಿದಿದೆ. ಕೂಡಲೆ ಹೆದ್ದಾರಿ ರಸ್ತೆ ದುರಸ್ತಿ ಮಾಡಲು ಜನಪ್ರತಿನಿಧಿ​ಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕ ಮಧು ಆಗ್ರಹಿಸಿದ್ದಾರೆ.