ಕುಂದಾಪುರ (ಸೆ.18): ಫೋಮ್‌ ಶೀಟ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ತದ್ರೂಪಿ ಪ್ರತಿಕೃತಿ ತಯಾರಿಸಿ ರಾಜ್ಯ ಸಾರಿಗೆ ಸಚಿವರ ಗಮನ ಸೆಳೆದಿದ್ದ ಹೆಮ್ಮಾಡಿ ಸಮೀಪದ ಬಗ್ವಾಡಿ ನಿವಾಸಿ ಪ್ರಶಾಂತ್‌ ಆಚಾರ್‌ ಅವರಿಂದ ಇನ್ನಷ್ಟುಪ್ರತಿಕೃತಿಗಳನ್ನು ತಯಾರಿಸಿ ಕೇಂದ್ರ ಕಚೇರಿಗೆ ಭೇಟಿ ನೀಡುವ ಗಣ್ಯರಿಗೆ ಸ್ಮರಣಿಕೆಯಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ

ಪ್ರಶಾಂತ್‌ ಆಚಾರ್‌ ಅವರ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಗೆ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ ಟ್ವೀಟರ್‌ನಲ್ಲಿ ಹಂಚಿಕೊಂಡು ಅಭಿನಂದನೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಗುರುವಾರ ಪ್ರಶಾಂತ್‌ ಆಚಾರ್‌ ಅವರ ಹೆಮ್ಮಾಡಿಯ ವರ್ಕ್ಶಾಪ್‌ಗೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಜಿಲ್ಲಾ ಅಧಿಕಾರಿ ಅರಣ್‌ ಕುಮಾರ್‌ ಭೇಟಿ ನೀಡಿದರು. ಈ ವೇಳೆ ಪ್ರಶಾಂತ್‌ ಆಚಾರ್‌ ಕೈಚಳಕದಿಂದ ಮೂಡಿಬಂದ ತದ್ರೂಪಿ ಬಸ್‌ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸರ್ಕಾರಿ ಬಸ್‌ ಮೇಲಿನ ವಿಶೇಷವಾದ ಅಭಿಮಾನಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಹೆಮ್ಮಾಡಿಯ ‘ಕೆಎಸ್‌ಆರ್‌ಟಿಸಿ’ ಹುಡುಗನಿಗೆ ಡಿಸಿಎಂ ಶ್ಲಾಘನೆ

ಬೆಂಗಳೂರಿಂದ ಕರೆ

ಈಗಾಗಲೇ ಬೆಂಗಳೂರು ಕೇಂದ್ರ ಕಚೇರಿಯಿಂದ ಕಲಾವಿದ ಪ್ರಶಾಂತ್‌ಗೆ ಹಿರಿಯ ಅಧಿಕಾರಿಗಳಿಂದ ಕರೆ ಬಂದಿದ್ದು, ಪಿಂಕ್‌ ಬಸ್‌ ಸೇರಿದಂತೆ ಕೆಎಸ್‌ಆರ್‌ಟಿಸಿ ಎಲ್ಲ ಮಾದರಿಯ ಬಸ್‌ಗಳನ್ನು ತಯಾರಿಸಲು ಮನವಿ ಮಾಡಿಕೊಂಡಿದ್ದಾರೆ. ಪ್ರಶಾಂತ್‌ ಆಚಾರ್‌ ತಯಾರಿಸಿದ ಎಲ್ಲ ಬಸ್‌ಗಳನ್ನು, ಕೇಂದ್ರ ಕಚೇರಿಗೆ ಭೇಟಿ ನೀಡುವ ವಿಶೇಷ ಅತಿಥಿಗಳಿಗೆ ಸ್ಮರಣಿಕೆ ರೂಪದಲ್ಲಿ ಕೊಡುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ರಾಜ್ಯ ಸಾರಿಗೆ ಸಚಿವರ ಸಮಯವನ್ನು ಸರಿದೂಗಿಸಿಕೊಂಡು ಭೇಟಿ ಮಾಡಿಸುವ ಭರವಸೆಯನ್ನೂ ಹಿರಿಯ ಅಧಿಕಾರಿಗಳು ನೀಡಿದ್ದಾರೆ.