ಕುಂದಾಪುರ (ಸೆ.16):  ಫೋಮ್‌ ಶೀಟ್‌ ಬಳಸಿಕೊಂಡು ಕೆಎಸ್‌ಆರ್‌ಟಿಸಿ ಬಸ್‌ಗಳ ತದ್ರೂಪಿ ಪ್ರತಿಕೃತಿ ತಯಾರಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾದ ತಾಲೂಕಿನ ಹೆಮ್ಮಾಡಿಯ ಯುವಕ ಪ್ರಶಾಂತ್‌ ಆಚಾರ್‌ ಕಲೆಗೆ ರಾಜ್ಯ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ‘ಕಲಾವಿದನ ಕೈಯ್ಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌’ ಶೀರ್ಷಿಕೆಯಡಿ ರಾಜ್ಯ ಆವೃತ್ತಿಯಲ್ಲಿ ‘ಕನ್ನಡಪ್ರಭ’ ಪ್ರಕಟಿಸಿದ ವರದಿಯನ್ನು ತಮ್ಮ ಅಧಿಕೃತ ಫೇಸ್‌ಬುಕ್‌, ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಡಿಸಿಎಂ ಲಕ್ಷ್ಮಣ್‌ ಸವದಿ ಅವರು ಕಲಾವಿದ ಪ್ರಶಾಂತ್‌ ಆಚಾರ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ‘ಐರಾವತ’, ‘ವೇಗದೂತ’ ಸಂಚಾರ ಫುಲ್ ವೈರಲ್‌!

‘ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಪ್ರಶಾಂತ್‌ ಆಚಾರ್‌ ಅವರು ಫೋಮ್‌ ಶಿಟ್‌ ಬಳಸಿ ರಚಿಸಿರುವ ನಮ್ಮ ಸಾರಿಗೆ ಸಂಸ್ಥೆಯ ಬಸ್‌ಗಳ ಯಥಾವತ್‌ ಪ್ರತಿಕೃತಿಗಳು ಅದ್ಭುತವಾಗಿ ಮೂಡಿಬಂದಿವೆ. ನಿಮ್ಮ ಪ್ರತಿಭಾಪೂರ್ಣ ಈ ಕೆಲಸಕ್ಕೆ ನಮ್ಮ ಇಲಾಖೆಯ ವತಿಯಿಂದ ಶುಭ ಹಾರೈಕೆಗಳು. ಶುಭವಾಗಲಿ, ಯಶಸ್ಸು ನಿಮ್ಮದಾಗಲಿ’ ಎಂದು ಸಚಿವರು ಕನ್ನಡಪ್ರಭ ವರದಿಯೊಂದಿಗೆ ಈ ಬರಹವನ್ನು ಹಂಚಿಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಕರೆ: ವರದಿ ಪ್ರಕಟವಾದ ಬಳಿಕ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಬೆಂಗಳೂರಿನಿಂದ ಕಲಾವಿದ ಪ್ರಶಾಂತ್‌ ಆಚಾರ್‌ ಅವರಿಗೆ ಕರೆ ಮಾಡಿ ಮಾತನಾಡಿದ ಪಿಆರ್‌ಒ(ಪಬ್ಲಿಕ್‌ ರಿಲೇಶನ್‌ ಆಫಿಸರ್‌) ಡಾ. ಲತಾ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಶಾಂತ್‌ ಕೈಚಳಕದಿಂದ ಮೂಡಿಬಂದ ಬಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಂಗಳೂರು ಕೆಎಸ್‌ಆರ್‌ಟಿಸಿ ಡಿಸಿ ಅವರಿಗೂ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಬಸ್‌ಗೆ ತಗಲುವ ವೆಚ್ಚದ ಮಾಹಿತಿ ಪಡೆದುಕೊಂಡ ಡಾ. ಲತಾ ಇಲಾಖೆಗೂ ಇಂತಹ ಪ್ರತಿಕೃತಿ ಮಾಡಿಕೊಡುವ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಪಿಂಕ್‌ ಬಸ್‌ ಸೇರಿದಂತೆ ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯ ಎಲ್ಲಾ ರೀತಿಯ ಬಸ್‌ಗಳನ್ನು ಪ್ರಶಾಂತ್‌ ಆಚಾರ್‌ ಅವರಿಂದ ನಿರೀಕ್ಷಿಸಿದ್ದು, ಸಾರಿಗೆ ಸಚಿವರಿಂದ ಈ ಎಲ್ಲಾ ಬಸ್‌ಗಳ ಮಾದರಿಗಳನ್ನು ಲಾಂಚ್‌ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಪ್ರಶಾಂತ್‌ ಹಂಚಿಕೊಂಡಿದ್ದಾರೆ.

 ಕೇಂದ್ರ ಕಚೇರಿಯಿಂದ ಮಾಹಿತಿ ಕೇಳಿದ್ದಾರೆ. ಕನ್ನಡಪ್ರಭ ಪತ್ರಿಕೆಯಲ್ಲಿ ಬಂದ ಮಾಹಿತಿ ಬಿಟ್ಟರೆ ಬೇರಾವ ಮಾಹಿತಿ ನನಗೆ ಸಿಕ್ಕಿಲ್ಲ. ಪ್ರಶಾಂತ್‌ ಆಚಾರ್‌ ಅವರು ನನಗೆ ಫೋನ್‌ ಕರೆಗೆ ಸಿಕ್ಕಿಲ್ಲ. ನನಗೂ ಬಸ್‌ಗಳನ್ನು ನೋಡಬೇಕೆನಿಸಿದೆ. ಹಿರಿಯ ಅಧಿಕಾರಿಗಳು ಭೇಟಿ ಮಾಡಲು ಸೂಚನೆ ನೀಡಿದ್ದಾರೆ. ಹೀಗಾಗಿ ನಾನು ಪ್ರಶಾಂತ್‌ ಆಚಾರ್‌ ಅವರನ್ನು ಭೇಟಿ ಮಾಡಿ ಬಸ್‌ಗಳನ್ನು ನೋಡುತ್ತೇನೆ. ನಮ್ಮ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯೂ ನಡೆದಿದೆ.

-ಅರುಣ್‌ ಕುಮಾರ್‌, ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಡಿ.ಸಿ.
 
ಕೋಟ್‌: ಪತ್ರಿಕೆಯಲ್ಲಿ ಬಂದ ಬಳಿಕ ನೂರಾರು ಕರೆಗಳು ಬಂದಿವೆ. ಹಲವರು ನನ್ನ ಬಳಿ ಬಸ್‌ಗೆ ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಕಚೇರಿಯಿಂದಲೂ ಕರೆ ಬಂದಿದೆ. ಸಾರಿಗೆ ಸಚಿವರು ನನ್ನ ಬಗ್ಗೆ ಅವರ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾರಿಗೆ ಸಚಿವರನ್ನು ಭೇಟಿಯಾಗುವ ಆಸೆ ಇದೆ.

-ಪ್ರಶಾಂತ್‌ ಆಚಾರ್‌, ಆಟಿಕೆ ಬಸ್‌ ತಯಾರಕ.