ಬೆಂಗಳೂರು (ಫೆ.07):‘ಎಸ್‌ಟಿ ಮೀಸಲು ಹೋರಾಟಕ್ಕೆ ಬರುವಂತೆ ನಿರಂಜನಾನಂದಪುರಿ ಸ್ವಾಮೀಜಿಗಳೇ ಖುದ್ದು ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಕರೆದಿದ್ದರು. ಆಗ ನನ್ನ ಬೆಂಬಲವಿದೆ ಎಂದಿದ್ದ ಸಿದ್ದರಾಮಯ್ಯ ಇಂದು ಹೋರಾಟಕ್ಕೆ ಆರ್‌ಎಸ್‌ಎಸ್‌ ಹಣ ನೀಡಿದೆ ಎಂದು ಆರೋಪಿಸುತ್ತಿದ್ದಾರೆ. ಈ ಮೂಲಕ ಸ್ವಾಮೀಜಿಗಳಿಗೆ ದ್ರೋಹ ಮಾಡಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಗಳು ಹೋರಾಟಕ್ಕೆ ಆಹ್ವಾನಿಸಿದಾಗ ನೀವು ಮಾಡಿಕೊಳ್ಳಿ ಎಂದು ಅನುಮತಿ ನೀಡಿದ್ದರು. ಸಿದ್ದರಾಮಯ್ಯ ಜತೆ ಚರ್ಚಿಸಿಯೇ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಈಗ ನನಗೆ ಹೋರಾಟಕ್ಕೆ ಆಹ್ವಾನವನ್ನೇ ನೀಡಿಲ್ಲ ಎನ್ನುತ್ತಿದ್ದಾರೆ. ಅಲ್ಲದೆ, ಈ ಹೋರಾಟಕ್ಕೆ ಬಾರದೆ ಆರ್‌ಎಸ್‌ಎಸ್‌ ಬೆಂಬಲ ಹಾಗೂ ಹಣ ನೀಡಿದೆ ಎನ್ನುತ್ತಾರೆ. ಸಿದ್ದರಾಮಯ್ಯ ಅವರ ಈ ನಡವಳಿಕೆಯನ್ನು ಕುರುಬರು ಮಾತ್ರವಲ್ಲ ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಮೀಸಲಿಗಾಗಿ ಕುರುಬರ ಶಕ್ತಿ ಪ್ರದರ್ಶನ: 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ! ...

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರ ಸ್ವಪ್ರತಿಷ್ಠೆಯೂ ಇಲ್ಲ. ರಾಜ್ಯದಲ್ಲಿರುವ 60 ಲಕ್ಷ ಕುರುಬ ಸಮುದಾಯದವರಿಗೆ ನ್ಯಾಯ ದೊರೆಯಬೇಕು ಎಂಬುದು ಹೋರಾಟದ ಉದ್ದೇಶ. ಸಿದ್ದರಾಮಯ್ಯ ಹೊರತುಪಡಿಸಿ ಎಲ್ಲರೂ ಬಂದಿದ್ದಾರೆ. ಅವರೊಬ್ಬರೇ ಬಂದಿಲ್ಲ ಎಂದರು.

ಥಟ್‌ ಅಂತ ಘೋಷಣೆ ಸಾಧ್ಯವಿಲ್ಲ:  ಕುರುಬರಿಗೆ ಎಸ್‌.ಟಿ. ಮೀಸಲಾತಿ ನೀಡುವುದು ರಾಜ್ಯ ಸರ್ಕಾರದ ಈಗಿನ ಕೆಲಸ ಅಲ್ಲ. ಮುಖ್ಯಮಂತ್ರಿಗಳು ಥಟ್‌ ಅಂತ ಮೀಸಲಾತಿ ಘೋಷಣೆ ಮಾಡಲು ಆಗುವುದಿಲ್ಲ ಎಂದೂ ಈ ಸಂದರ್ಭದಲ್ಲಿ ಈಶ್ವರಪ್ಪ ಹೇಳಿದರು. ಕುರುಬರಿಗೆ ಎಸ್‌.ಟಿ. ಮಾನ್ಯತೆ ಪ್ರಸ್ತಾವನೆ ಎರಡು ಬಾರಿ ಕೇಂದ್ರಕ್ಕೆ ಹೋಗಿ ಬಂದಿದೆ. ಈಗ ಕಾನೂನಾತ್ಮಕವಾಗಿ ಕುಲಶಾಸ್ತ್ರೀಯ ಅಧ್ಯಯನ ಆಗಬೇಕಿದೆ. ಒಂದೆರಡು ತಿಂಗಳಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ಮುಗಿಯಲಿದ್ದು, ಬಳಿಕ ಸಂಪುಟದ ಮುಂದೆ ತಂದು ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು.