ಶಿವಮೊಗ್ಗ(ಆ.25): ವಾಜಪೇಯಿ ಅವರ ಚಿತಾಭಸ್ಮದೊಂದಿಗೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಕ್ಕೆ ಬಿಜೆಪಿ ಶಾಸಕ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ನಗರದ ಗೋಪಿ ವೃತ್ತದ ಬಳಿ ಜಿಲ್ಲಾ ಬಿಜೆಪಿಯು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನ ಕೂಡಲಿಯಲ್ಲಿ ವಿಸರ್ಜನೆ ಮಾಡಲು ಏರ್ಪಡಿಸಲಾಗಿದ್ದ 'ಅಸ್ಥಿ ಕಳಸ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶಕಂಡ ಅಪ್ರತಿಮ ನಾಯಕ ಹಾಗೂ ಮಹಾನ್ ದೇಶ ಭಕ್ತ. ಇಂತಹ ದೇಶ ಭಕ್ತರ ಬಗ್ಗೆ ಕಾಂಗ್ರೆಸ್ ಮತ್ತು ಅದರ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಇಂತಹ ಮಾತುಗಳು ದೇಶ ಭಕ್ತರಿಗೆ ಅಸಮಾಧಾನ ತರುವಂತಹದ್ದು, ಹೀಗಾಗಿ ಖರ್ಗೆ ಅವರು ದೇಶದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ಮಾಜಿ ಸಭಾಪತಿ ಡಿ.ಹೆಚ್. ಶಂಕರ ಮೂರ್ತಿ ಬಿ.ವೈ.ರಾಘವೇಂದ್ರ, ಅಶೋಕ್ ನಾಯ್ಕ, ಆರ್.ಕೆ.ಸಿದ್ದರಾಮಣ್ಣ ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.