ಮೈಸೂರು(ಜ.19): ಸಚಿವ ಆಕಾಂಕ್ಷಿಗಳ ಖಣ ನಮ್ಮ ಮೇಲಿದೆ. ಇನ್ನೆರಡು ದಿನದಲ್ಲಿ ಈ ಖಣ ತೀರಲಿದೆ ಎಂದು ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ. ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಹೋದ ಹಿನ್ನೆಲೆಯಲ್ಲೇ ಈಶ್ವರಪ್ಪ ಮೈಸೂರಿನಲ್ಲಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವ ಆಕಾಂಕ್ಷಿಗಳ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವುದು ನಮ್ಮ ಕರ್ತವ್ಯ. ಅವರ ಋಣ ತೀರಿಸುವ ಕೆಲಸ ನಾವು ಮಾಡುತ್ತೇವೆ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ. ಅದು ಸಚಿವರನ್ನಾಗಿ ಮಾಡುವುದು ಅಥವಾ ಸ್ಥಾನ ಕೊಡುವುದಲ್ಲ. ಅವರ ಋಣವನ್ನು ನಾವು ತೀರಿಸಬೇಕಿದೆ ಅಷ್ಟೇ. ಇನ್ನು ಎರಡು ದಿನದಲ್ಲಿ ಅದು ಆಗಲಿದೆ ಎಂದು ಹೇಳಿದ್ದಾರೆ.

 

ಅಮಿತ್ ಶಾ ರಾಜ್ಯ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವೇಳೆ ಏನು ಚರ್ಚೆ ಆಗಿದೆ ನನಗೆ ಮಾಹಿತಿ ಇಲ್ಲ. ನಿಮಗೆ ಇರುವಷ್ಟೇ ಮಾಹಿತಿ ನನಗಿದೆ. ಪೂರ್ಣ ಬಹುಮತ ಬಾರದ ಕಾರಣ ಈ ಗೊಂದಲ ಉಂಟಾಗಿದೆ. ಆದಷ್ಟು ಬೇಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ ಎಂದಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಅಯೋಗ್ಯ ಸರ್ಕಾರ ಎಂದು ರಾಜ್ಯದ ಜನರು ಮನೆಯಲ್ಲಿ ಕೂರಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನ ವಿರೋಧಿ ಕೆಲಸ ಮಾಡಿದರು. ಜಾತಿ ಜಾತಿಯನ್ನು ಒಡೆದರು. ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚಿದರು. ಅದಕ್ಕೆ ಅವರನ್ನು ಜನ ಮನೆಗೆ ಕಳುಹಿಸಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

ಸಚಿವ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಬಿಜೆಪಿ ನಾಯಕರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಟೀಕೆ ಮಾಡುತ್ತಿರುವವರು ಬಾಯಿ ಮುಚ್ಚಿಕೊಂಡಿರಬೇಕು. ಅವರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ ಎಂದು ಹೇಳಿದ್ದಾರೆ.