ರೈತರಿಗೆ ನೀರು ಕೊಡಿಸಿದ ಕ್ರೆಡಿಟ್ ಪಡೆಯಲು ಕಿತ್ತಾಟ ಶುರುವಾಗಿದೆಯೇ? ಹೀಗೊಂದು ಪ್ರಶ್ನೆ ಮೂಡುವಂಥ ಬೆಳವಣಿಗೆ ಮಂಡ್ಯದಲ್ಲಿ ಆಗಿದೆ.
ಮಂಡ್ಯ[ ಜು. 23] ಕೆಆರ್‌ಎಸ್ ಅಣೆಕಟ್ಟೆಯಿಂದ ರೈತರ ಬೆಳೆಗಳಿಗೆ ನೀರು ಬಿಡಿಸಿದ್ದು ಯಾರು...? ಇಂತಹದ್ದೊಂದು ಹೊಸ ಚರ್ಚೆಗೆ ಸಂಸದೆ ಸುಮಲತಾ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳು ಕಾರಣವಾಗಿವೆ.
ಕೇಂದ್ರದ ಜಲಾನಯನ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಂಡ್ಯ ರೈತರ ಸಮಸ್ಯೆಗೆ ಸ್ಪಂದಿಸಿದ್ದಕ್ಕಾಗಿ ತುಂಬು ಹೃದಯದ ಅಭಿನಂದನೆ ಎಂದು ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಸುಮಲತಾ ಜೂನ್ 20 ರಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಪತ್ರ ಬರೆದು ಮಂಡ್ಯ ಜಿಲ್ಲೆಗೆ ಕೆಆರ್‌ಎಸ್ ಅಣೆಕಟ್ಟೆಯಿಂದ 2 ಟಿಎಂಸಿ ನೀರು ಬಿಡಲು ಕೋರಿಕೊಂಡಿದ್ದರು.
ಜೂನ್ 28 ರಂದು ಸುಮಲತಾ ಮನವಿಗೆ ಸಚಿವರಿಂದ ಪತ್ರದ ಮೂಲಕ ಉತ್ತರ ಬಂದಿತ್ತು. ಜುಲೈ 15 ರಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು.
ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?
ಸಭೆಯಲ್ಲಿ ರೈತರ ಬೆಳೆಗಳಿಗೆ 10 ದಿನ ನಾಲೆ ಮೂಲಕ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಜುಲೈ 16 ರ ಮಧ್ಯರಾತ್ರಿಂದ ರೈತರ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸಲಾಗಿತ್ತು. ಇದೀಗ ಕೇಂದ್ರ ಜಲಾನಯನ ಸಚಿವರಿಗೆ ಸುಮಲತಾ ಅಭಿನಂದನೆ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಜಲಾನಯನ ಸಚಿವರಿಗೆ ನೀರು ಬಿಡಲು ಪತ್ರ ಮೂಲಕ ತಾವು ಮನವಿ ಮಾಡಿದ್ದಕ್ಕೆ ಸಚಿವರು ಪ್ರತಿಕ್ರಿಸಿದ್ದ ಪತ್ರ ಪೋಸ್ಟ್ ಮಾಡಿರುವ ಸಂಸದೆ ಸುಮಲತಾ ಪತ್ರ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ಚರ್ಚೆ. ರೈತರಿಗೆ ನೀರು ಬಿಡಿಸಿದ ಕ್ರೆಡಿಟ್ ಪಡೆಯಲು ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ತೆರೆಮರೆ ಯತ್ನ ನಡೆಯಲಾರಂಭಿಸಿದೆ ಎಂಬ ಚರ್ಚೆ ಆರಂಭವಾಗಿದೆ.
ಸುಮಲತಾ ಸಚಿವರಿಂದ ಪ್ರತ್ಯುತ್ತರ ಬಂದ ದಿನವೇ ಫೇಸ್‌ಬುಕ್‌ನಲ್ಲಿ ಲೆಟರ್ ಹಾಕಬಹುದಿತ್ತು. ಆದ್ರೆ ನಾಲೆಗೆ ನೀರು ಬಿಟ್ಟ ನಂತರ ಈಗ ಫೇಸ್‌ಬುಕ್‌ಗೆ ಈ ಲೆಟರ್ ಹಾಕಿದ್ದಾರೆ. ಹಾಗಾದ್ರೆ ರೈತರ ಬೆಳೆಗಳಿಗೆ ನೀರು ಬಿಡಿಸಿದ ಕ್ರೆಡಿಡ್ ಪಡೆಯಲು ಸಂಸದೆ ಸುಮಲತಾ ಮುಂದಾದರಾ ಎಂಬ ಪ್ರಶ್ನೆ ಮೂಡಿದೆ.
