ಮುಣಿಸಿಕೊಂಡ ಮುಂಗಾರು: ಬರಿದಾಗುತ್ತಿರುವ ಕೃಷ್ಣೆಯ ಒಡಲು, ಮರುಕಳಿಸುವುದೇ ಬರಗಾಲದ ಛಾಯೆ?
ಬಹು ಗ್ರಾಮ ಕುಡಿಯುವ ನೀರಿನ ಘಟಕಗಳು ಸಂಪೂರ್ಣ ಸ್ಥಗಿತವಾಗಿವೆ. ಈ ಸಮಸ್ಯೆ ಎದುರಾಗುತ್ತದೆಂಬ ಅರಿವಿದ್ದರೂ ತಾಲೂಕಿನ ಯಾವೊಬ್ಬ ಅಧಿಕಾರಿಗಳೂ ಈ ಬಗ್ಗೆ ಗಮನ ಹರಿಸಲಿಲ್ಲ. ಬದಲಾಗಿ ವರ್ಗಾವಣೆ ಕಡೆ ಗಮನ ನೀಡಿ ಪೊಲಿಟಿಕಲ್ ಪವರ್‌ಗಳ ಬಳಿ ಓಡಾಡುವುದರಲ್ಲಿ ನಿರತರಾಗಿದ್ದಾರೆ.
ಸಿ.ಎ.ಇಟ್ನಾಳಮಠ
ಅಥಣಿ(ಜೂ.20): ತಾಲೂಕಿನ ಜೀವ ನದಿ ಎನಿಸಿಕೊಂಡ ಕೃಷ್ಣಾ ನದಿಯಲ್ಲಿ ಜಲ ಬತ್ತಿದೆ. ಜೂನ್ ತಿಂಗಳು ಗತಿಸಿದರೂ ಮುಂಗಾರು ಮಳೆಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಕಿಲೊಮೀಟರ್ ತನಕ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಬಹು ಗ್ರಾಮ ಕುಡಿಯುವ ನೀರಿನ ಘಟಕಗಳು ಸಂಪೂರ್ಣ ಸ್ಥಗಿತವಾಗಿವೆ. ಈ ಸಮಸ್ಯೆ ಎದುರಾಗುತ್ತದೆಂಬ ಅರಿವಿದ್ದರೂ ತಾಲೂಕಿನ ಯಾವೊಬ್ಬ ಅಧಿಕಾರಿಗಳೂ ಈ ಬಗ್ಗೆ ಗಮನ ಹರಿಸಲಿಲ್ಲ. ಬದಲಾಗಿ ವರ್ಗಾವಣೆ ಕಡೆ ಗಮನ ನೀಡಿ ಪೊಲಿಟಿಕಲ್ ಪವರ್‌ಗಳ ಬಳಿ ಓಡಾಡುವುದರಲ್ಲಿ ನಿರತರಾಗಿದ್ದಾರೆ.
ಗ್ರಾಮೀಣ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯ ನಿರ್ಲಕ್ಷವೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ನದಿ ಸಂಪೂರ್ಣ ಬರಿದಾಗಿ ಜಲಕ್ಷಾಮ ಎದುರಾಗುವ ಎಲ್ಲ ಸ್ಪಷ್ಟವಾದ ಲಕ್ಷಣಗಳು ಕಂಡರೂ ಆಡಳಿತ ಮೌನಕ್ಕೆ ಜಾರಿದೆ. ಎಷ್ಟುಹಳ್ಳಿಗಳಿಗೆ ಸಮಸ್ಯೆಯಾಗಬಹುದು? ಮುಂದೆ ಯಾವ ಕ್ರಮ ಕೈಗೊಳ್ಳಬೇಕು? ಎಂಬ ಕ್ರಿಯಾ ಯೋಜನೆ ಮಾಡಿಲ್ಲ. ಕುಡಿಯುವ ನೀರಿನ ಸಮಸ್ಯೆ ಅಧ್ಯಯನಕ್ಕೆ ಕಳೆದ ವಾರ ಜಿಪಂ ಸಿಇಒ ಅವರು ಭೇಟಿ ನೀಡಿದಾಗ ಅವರಿಗೆ ಈ ಇಲಾಖೆ ಯಾವುದೇ ಸ್ಪಷ್ಟಮಾಹಿತಿ ಸಹ ನೀಡಿಲ್ಲ.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಕರೆಂಟ್ ಶಾಕ್: ಬಿಲ್ ನೋಡಿ ಹೌಹಾರಿದ ವಿಟಿಯು ಕುಲಪತಿ !
ನೀರಿನ ಸಮಸ್ಯೆ ಕುರಿತು ಇಲಾಖೆ ಮುಖ್ಯಸ್ಥರು ನದಿಯಲ್ಲಿ ನೀರು ಇರುವಷ್ಟುದಿನ ನೀರು ಕೊಡಲು ಸಾಧ್ಯ. ಮುಂದೆ ನೀರು ಪೂರೈಕೆ ಮಾಡುವುದು ಅಸಾಧ್ಯವೆಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಸುಮಾರು 25 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ವಾರದಿಂದ ತಾಲೂಕಿನಾದ್ಯಂತ ಜಲ ವಿಪತ್ತು ಉಲ್ಬಣವಾಗಲಿದೆ. ನೀರಾವರಿ ಇಲಾಖೆಯವರು ಕೃಷ್ಣಾ ನದಿಯಲ್ಲಿ ನೀರಿಲ್ಲ. ನೀರಿನ ಸಮಸ್ಯೆ ಆಗುತ್ತದೆಂದು ತಾಲೂಕು ಆಡಳಿತಕ್ಕೆ ವರದಿ ನೀಡಲಿಲ್ಲ. ಇಲಾಖೆಗಳ ಮಧ್ಯ ಸಮನ್ವಯತೆ ಕೊರತೆಯೂ ನೀರಿನ ಹಾಹಾಕಾರಕ್ಕೆ ಕಾರಣವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಬಿಜೆಪಿ ಮೊದಲು ಎಲ್ಲರ ಖಾತೆಗೆ 15 ಲಕ್ಷ ಹಾಕಿ ನಂತರ ನಮ್ಮ ವಿರುದ್ಧ ಪ್ರತಿಭಟಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ತಲುಪದ ಮಹಾ ನೀರು:
ನೆರೆಯ ಮಹಾರಾಷ್ಟ್ರ ದಿಂದ 1.50 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಟ್ಟರೂ ಅಥಣಿಗೆ ತಲುಪಲಿಲ್ಲ. ಚಿಕ್ಕೋಡಿ ತಾಲೂಕಿನ ಜನ ಅಲ್ಲಿಯೇ ತಡೆವೊಡ್ಡಿದರು. ಅಥಣಿ ತಾಲೂಕಿನ ತನಕ ಬರುವುದಕ್ಕೆ ನೀರಾವರಿ ಇಲಾಖೆ ಕಾಳಜಿ ವಹಿಸಿಲ್ಲ. 2003 ಮತ್ತು 2013ರಲ್ಲಿ ಜಲಕ್ಷಾಮ ಎದುರಾಗಿತ್ತು. ಅದೇ ಪರಿಸ್ಥಿತಿ ಇದೀಗ ಮರುಕಳಿಸುತ್ತಿದೆಯೇ? ಎಂಬ ಆತಂಕ ಜನರಲ್ಲಿ ಮೂಡಿದೆ.
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅವಶ್ಯ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಆದೇಶಿಸಿದ್ದೇನೆ. ಬೋರವೆಲ್ ಕೊರೆಸಲು ಸಾಧ್ಯವಿರುವೆಡೆ ಕೊಳವೆಬಾವಿ ಕೊರೆಸಲು ಸೂಚನೆ ನೀಡಿದ್ದೇನೆ. ಮುಂಗಾರು ಮಳೆ ತಡವಾಗಿದ್ದರಿಂದ ನೀರಿನ ಸಮಸ್ಯೆಯಾಗಿದೆ. ಅಗತ್ಯ ಕ್ರಮ ಕೈಗೊಳ್ಳಲು ಆದೇಶ ಮಾಡಿದ್ದೇನೆ ಅಂತ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.