ಕೆಆರ್‌ಇಡಿಎಲ್ ಅಧಿಕಾರಿ ಮೈಸೂರಿನಲ್ಲಿ ನಿಗೂಢವಾಗಿ ಸಾವು
ಬೆಂಗಳೂರಿನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆಯ (ಕೆಆರ್‌ಇಡಿಎಲ್) ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಿ.ಕೆ.ದಿನೇಶ್ ಕುಮಾರ್ (50) ಅವರು ಇಲ್ಲಿನ ಬೋಗಾದಿಯಲ್ಲಿರುವ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
ಮೈಸೂರು (ನ.30): ಬೆಂಗಳೂರಿನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆಯ (ಕೆಆರ್‌ಇಡಿಎಲ್) ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಿ.ಕೆ. ದಿನೇಶ್ ಕುಮಾರ್ (50) ಇಲ್ಲಿನ ಬೋಗಾದಿಯಲ್ಲಿರುವ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರದ ಬಳಿ ಅವರು ಪತ್ನಿ, ಕಿರಿಯ ಪುತ್ರನೊಂದಿಗೆ ವಾಸವಿದ್ದರು. ಹಿರಿಯ ಪುತ್ರ ಮಂಗಳೂರಿನಲ್ಲಿ (Mangaluru) ಎಂಜಿನಿಯರಿಂಗ್ (Engineering) ಓದುತ್ತಿದ್ದಾರೆ. ಡಿ.ಕೆ. ದಿನೇಶ್ ಕುಮಾರ್ ಅವರು ಮೃತಪಟ್ಟು ಸುಮಾರು 40 ಗಂಟೆಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪತಿ ಮೃತಪಟ್ಟಿದ್ದನ್ನು ನೋಡಿ ಪತ್ನಿ ಹಾಗೂ ಕಿರಿಯ ಪುತ್ರ ಪ್ರಜ್ಞೆ ತಪ್ಪಿದ್ದರಿಂದಾಗಿ ಪ್ರಕರಣ ಗೊತ್ತಾಗಲು ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸಾಕಷ್ಟು ಅನುಮಾನಗಳು ಇವೆ.
ನ. 27 ರಂದು ರಾತ್ರಿ ಜೊತೆಯಲ್ಲೇ ಊಟ ಮಾಡಿ ಮಲಗಿದ್ದೆವು. 28 ರಂದು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ದಿನೇಶ್ ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದನ್ನು ನೋಡಿ ನಾವೂ ಮೂರ್ಛೆ ಹೋದೆವು ಎಂದು ಪತ್ನಿ ಮತ್ತು ಪುತ್ರ ಹೇಳಿಕೆ ನೀಡಿದ್ದಾರೆ.
ಆದರೆ, ಡಿ.ಕೆ. ದಿನೇಶ್‌ಕುಮಾರ್ ಅವರ ಮೃತದೇಹ ಊದಿಕೊಂಡಿದ್ದು, ಬಾಯಲ್ಲಿ ರಕ್ತಸ್ರಾವವಾಗಿದೆ. ದೇಹದ ಕೆಲಭಾಗ ಗಾಯವಾಗಿದೆ. ಹಾಗಾಗಿ, ಈ ಸಾವಿನಲ್ಲಿ ಅನುಮಾನವಿದ್ದು, ಮನೆಯಲ್ಲಿ ಜೊತೆಯಲ್ಲಿಯೇ ಇದ್ದ ಪತ್ನಿ, ಪುತ್ರ, ಕೆಲಸಗಾರರನ್ನು ವಿಚಾರಣೆ ನಡೆಸಿ, ನ್ಯಾಯ ಒದಗಿಸುವಂತೆ ಮೃತ ವ್ಯಕ್ತಿಯ ಸೋದರ ಮಾವನವರಾದ ಮಂಡ್ಯದ ವಕೀಲ ಎಚ್.ಎಂ. ನಾರಾಯಣ ಎಂಬವರು ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಂದ ನಂತರ ಏನಾಗಿದೆ ಎಂಬುದು ತಿಳಿಯಲಿದೆ ಎಂದು ಸರಸ್ವತಿಪುರಂ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಎಂ. ರವೀಂದ್ರ ತಿಳಿಸಿದ್ದಾರೆ.
ಪ್ರಜ್ಞೆ ತಪ್ಪಿದ್ದರು ಎನ್ನಲಾದ ದಿನೇಶ್ ಕುಮಾರ್ ಅವರನ್ನು ಮನೆಯ ಕೆಲಸಗಾರರು ಕಾಮಾಕ್ಷಿ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ಘಟನೆಯಿಂದಾಗಿ ಅಸ್ವಸ್ಥರಾಗಿ ಪ್ರಜ್ಞಾಹೀನರಾದ ಪತ್ನಿ ಆಶಾ ಮತ್ತು ಪುತ್ರನನ್ನೂ ಅದೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ನಂತರ ಅಪೋಲೊ ಅಲ್ಲಿಂದ ಸುಯೋಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ತೆರಳಿದ ಸರಸ್ವತಿಪುರಂ ಠಾಣೆ ಪೊಲೀಸರು, ದಿನೇಶ್‌ಕುಮಾರ್ ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಿದರು.
ಮೃತ ದಿನೇಶ್‌ಕುಮಾರ್ ಅವರ ಶವವನ್ನು ಸ್ವಗ್ರಾಮ ಶ್ರೀರಂಗಪಟ್ಟಣ ತಾಲೂಕು ದೊಡ್ಡಪಾಳ್ಯಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮಂಗಳೂರಿನಲ್ಲಿ ಓದುತ್ತಿರುವ ಹಿರಿಯ ಪುತ್ರ ವಿಧಿವಿಧಾನ ನೆರವೇರಿಸಿದರು. ಆದರೆ ಆಸ್ಪತ್ರೆಯಲ್ಲಿರುವ ಪತ್ನಿ ಹಾಗೂ ಕಿರಿಯ ಪುತ್ರ ಬಂದಿರಲಿಲ್ಲ. ಬೆಂಗಳೂರಿನಿಂದ ಇಲಾಖೆಯ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು, ಅಂತಿಮ ದರ್ಶನ ಪಡೆದರು.
ಎಫ್‌ಐಆರ್‌ನಲ್ಲಿ ಏನಿದೆ?
ಚನ್ನಪಟ್ಟಣ ತಾಲೂಕಿನ ಹೊಟ್ಟಿಗನ ಹೊಸಹಳ್ಳಿ ಗ್ರಾಮದ ಆಶಾ ಹಾಗೂ ದಿನೇಶ್‌ಕುಮಾರ್ ಅವರ ವಿವಾಹ 20 ವರ್ಷಗಳ ಹಿಂದೆ ನಡೆದಿತ್ತು. ಇತ್ತೀಚಿನ ವರ್ಷಗಳಲ್ಲಿ ಸಂಸಾರದಲ್ಲಿ ಸಣ್ಣಪುಟ್ಟಜಗಳವಾಗುತ್ತಿತ್ತು. ನ.26ರ ರಾತ್ರಿ 9 ರಿಂದ ನ.28ರ ಬೆಳಗ್ಗೆ 6 ಗಂಟೆ ನಡುವೆ ಸಂಭವಿಸಿರಬಹುದಾದ ಈ ಸಾವು ಸಹಜವಾದುದಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ನಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿ ದೂರು ನೀಡಿದ್ದು, ಪತ್ನಿ ಆಶಾ, ಮಗ ಮತ್ತು ಕೆಲಸದಾಕೆಯನ್ನು ಹಾಗೂ ಮನೆಯಲ್ಲಿದ್ದ ಶವವನ್ನು ಸಾಗಿಸಿದ ಅಂಬ್ಯುಲೆನ್ಸ್ ಚಾಲಕನನ್ನು ವಿಚಾರಣೆಗೊಳಪಡಿಸಿ, ಸೂಕ್ತ ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ದೂರುದಾರ ಎಚ್.ಎಂ. ನಾರಾಯಣ ಕೋರಿದ್ದಾರೆ.
ಸರಸ್ವತಿಪುರಂ ಠಾಣೆಯ ಪೊಲೀಸರು ಸಿಆರ್‌ಪಿಸಿ 174 ಪ್ರಕಾರ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ಶವ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ.