ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಎಂಡಿ ಅಂಜುಮ್ ಪರ್ವೇಜ್ ಅವರು ನಿಲ್ದಾಣದಲ್ಲಿ ‘ಕೆ.ಆರ್.ಪುರ’ ಎಂದು ನಾಮಫಲಕ ಬದಲಿಸಲು ಸೂಚಿಸಿದ್ದಾರೆ. ಅದರಂತೆ ಕ್ರಮ ವಹಿಸಲಾಗಿದೆ ಎಂದ ಶ್ರೀವಾಸ್ ರಾಜಗೋಪಾಲನ್.
ಬೆಂಗಳೂರು(ಮಾ.17): ನಮ್ಮ ಮೆಟ್ರೋದ ನೂತನ ನಿಲ್ದಾಣ ‘ಕೆ.ಆರ್.ಪುರಂ’ ಹೆಸರು ‘ಕೆ.ಆರ್.ಪುರ’ವಾಗಿ ಬದಲಾಗಿದೆ. ಕನ್ನಡಪರ ಸಂಘಟನೆಗಳ ಒತ್ತಾಯದ ಮೇರೆಗೆ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಲ್ದಾಣದ ನಾಮಫಲಕದ ದೋಷ ನಿವಾರಿಸಿದೆ.
ಜಂಕ್ಷನ್ ಸೇರಿ ಇತರೆಡೆ ಈ ಹಿಂದೆ ಕೆ.ಆರ್.ಪುರಂ ಎಂದು ನಾಮಕರಣ ಮಾಡಲಾಗಿತ್ತು. ಆದರೆ, ‘ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ. ಆದರೆ, ಇತ್ತಿಚೆಗೆ ಅನ್ಯ ಭಾಷೆಯ ಪ್ರಭಾವದಿಂದಾಗಿ ಹೆಸರನ್ನು ತಪ್ಪಾಗಿ ಬಳಸಲಾಗುತ್ತಿದೆ. ನಮ್ಮ ಮೆಟ್ರೋ ಕೂಡ ಇದನ್ನೇ ಅನುಸರಿಸಿದೆ. ತಕ್ಷಣ ‘ಪುರಂ’ ಎಂಬುದನ್ನು ತೆಗೆದು ‘ಪುರ’ ಎಂದು ಸರಿಯಾಗಿಸಬೇಕು ಎಂದು ಕನ್ನಡಪರ ಸಂಘಟನೆಗಳು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿತ್ತು. ಜತೆಗೆ ತಹಸೀಲ್ದಾರ್ ಕಚೇರಿ ಸೇರಿ ಇತರೆಡೆ ಸಂಗ್ರಹಿಸಿದ ದಾಖಲೆಗಳನ್ನು ಒದಗಿಸಲಾಗಿತ್ತು.
Bengaluru: ಮೆಟ್ರೋ ಅವಘಡ, ಮಾಲಿನ್ಯ ತಡೆಗೆ ತಜ್ಞರ ನೇಮಕ
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀವಾಸ್ ರಾಜಗೋಪಾಲನ್, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಎಂಡಿ ಅಂಜುಮ್ ಪರ್ವೇಜ್ ಅವರು ನಿಲ್ದಾಣದಲ್ಲಿ ‘ಕೆ.ಆರ್.ಪುರ’ ಎಂದು ನಾಮಫಲಕ ಬದಲಿಸಲು ಸೂಚಿಸಿದ್ದಾರೆ. ಅದರಂತೆ ಕ್ರಮ ವಹಿಸಲಾಗಿದೆ ಎಂದರು
25ರ ಬಳಿಕ ಮೆಟ್ರೋ ಸಂಚಾರ ಪ್ರಾರಂಭ?
ಕಳೆದ ಭಾನುವಾರದಿಂದ ಬಹುನಿರೀಕ್ಷಿತ ಕೆ.ಆರ್.ಪುರಂ-ವೈಟ್‌ಫೀಲ್ಡ್ ಮಾರ್ಗದಲ್ಲಿ ಬೆಳಗ್ಗೆ 5ರಿಂದ ರಾತ್ರಿ 11 ಗಂಟೆವೆರೆಗಿನ ಪ್ರಾಯೋಗಿಕ ಸಂಚಾರವೂ ಮುಕ್ತಾಯವಾಗಿದೆ. ಮಾ.12ರಿಂದ 14ರವರೆಗೆ ಮೂರು ದಿನಗಳ ಕಾಲ 12 ನಿಮಿಷಗಳ ಅಂತರದಲ್ಲಿ ಐದು ರೈಲುಗಳನ್ನು ಸಂಚರಿಸಲಾಗಿತ್ತು. ಕೆಲ ಸಣ್ಣಪುಟ್ಟತಾಂತ್ರಿಕ ದೋಷಗಳನ್ನು ಪರಿಹರಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಸರ್ಕಾರದಕ್ಕೆ ಉದ್ಘಾಟನಾ ದಿನಾಂಕ ನಿಗದಿಸುವಂತೆ ಕೋರಲಾಗಿದ್ದು, ಅನುಮತಿ ದೊರೆತ ಬಳಿಕ ಕಾರ್ಯಾಚರಣೆ ಆರಂಭವಾಗಲಿದೆ. ಮಾ. 25ರೊಳಗಾಗಿ ಬಳಿಕ ಜನಸೇವೆಗೆ ಮುಕ್ತಗೊಳಿಸುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೇವೆ ಎಂದು ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
