ಕೆ.ಆರ್.ಪೇಟೆ : ವ್ಯಾಪಾರಿಗಳಿಂದ ಮುಖ್ಯ ರಸ್ತೆಗಳ ಫುಟ್ ಪಾತ್ ಒತ್ತುವರಿ

 ದಿನೇ ದಿನೇ ಬೆಳವಣಿಗೆ ಕಾಣುತ್ತಿರುವ ಕೃಷ್ಣರಾಜಪೇಟೆ ತಾಲೂಕಿನ ಪ್ರಮುಖ ರಸ್ತೆಗಳು ಒತ್ತುವರಿಯಾಗಿರುವುದರಿಂದ ಜನರು ಸುಗಮವಾಗಿ ಸಂಚಾರ ಮಾಡಲು ಪಾದಚಾರಿ(ಫುಟ್ ಪಾತ್) ಮಾರ್ಗಗಳೇ ಇಲ್ಲವಾಗಿದೆ.

KR Pete: Footpath encroachment of main roads by traders snr

 ಎಂ.ಕೆ.ಹರಿಚರಣತಿಲಕ್ 

 ಕೆ.ಆರ್.ಪೇಟೆ  : ದಿನೇ ದಿನೇ ಬೆಳವಣಿಗೆ ಕಾಣುತ್ತಿರುವ ಕೃಷ್ಣರಾಜಪೇಟೆ ತಾಲೂಕಿನ ಪ್ರಮುಖ ರಸ್ತೆಗಳು ಒತ್ತುವರಿಯಾಗಿರುವುದರಿಂದ ಜನರು ಸುಗಮವಾಗಿ ಸಂಚಾರ ಮಾಡಲು ಪಾದಚಾರಿ(ಫುಟ್ ಪಾತ್) ಮಾರ್ಗಗಳೇ ಇಲ್ಲವಾಗಿದೆ.

ಮಂಡ್ಯ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಕೃಷ್ಣರಾಜಪೇಟೆ ಪಟ್ಟಣವು ಒಂದು. ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಹಲವು ಬಡಾವಣೆಗಳಿವೆ. ದಿನದಿಂದ ದಿನಕ್ಕೆ ಪಟ್ಟಣದ ವ್ಯಾಪ್ತಿ ವಿಸ್ತಾರಗೊಳ್ಳುತ್ತಲೇ ಇದೆ.

ಪಟ್ಟಣದ ಎಪಿಎಂಸಿಯಲ್ಲಿ ಎಳನೀರು, ಸೊಪ್ಪು ತರಕಾರಿ ಸೇರಿ ನಿತ್ಯ ವಹಿವಾಟು ನಡೆಯುತ್ತಿದೆ. ದಿನನಿತ್ಯ ಸಾವಿರಾರು ರೈತರು ಪಟ್ಟಣಕ್ಕೆ ಆಗಮಿಸುತ್ತಾರೆ. ಸುಮಾರು 20 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿದ್ದು ನಿತ್ಯ ತಾಲೂಕಿನ ವಿವಿಧೆಡೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಶುಭ ಕಾರ್ಯದ ಜೊತೆಗೆ ತಾಲೂಕು ಕಚೇರಿ, ಬ್ಯಾಂಕ್ ವ್ಯವಹಾರ ಸೇರಿ ಹಲವು ವ್ಯವಹಾರಗಳಿಗೆ ನಿತ್ಯ ಜನರು, ರೈತರು ಪಟ್ಟಣಕ್ಕೆ ಆಗಮಿಸುತ್ತಾರೆ.

 ಫುಟ್‌ಪಾತ್‌ ಅತಿಕ್ರಮಣ:  ಸದಾ ಜನರಿಂದ ಗಿಜುಗುಟ್ಟುವ ಪಟ್ಟಣದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯವಾದ ಪಾದಚಾರಿ ಮಾರ್ಗವೇ ಇಲ್ಲ. ಮೈಸೂರು ಕಡೆಯಿಂದ ಪಟ್ಟಣ ಪ್ರವೇಶಿಸುವ ಕಾಗುಂಡಿ ಹಳ್ಳದಿಂದ ಹಿಡಿದು ಗ್ರಾಮಭಾರತಿ ವೃತ್ತದವರೆಗೆ, ಹೊಸಹೊಳಲು ಕಡೆಯಿಂದ ಆಗಮಿಸುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಿಂದ ಹಿಡಿದು ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆವರೆಗೆ ಸಾರ್ವಜನಿಕರ ಫುಟ್ ಪಾತ್ ಅತಿಕ್ರಮಣವಾಗಿದೆ.

ಹೂವು, ಹಣ್ಣು ತರಕಾರಿ, ಬಟ್ಟೆ , ಚಪ್ಪಲಿ ಮಾರುವವರು, ಪಾನಿಪೂರಿ, ಕಬಾಬ್ ಅಂಗಡಿಗಳಿಂದ ಹಿಡಿದು ಕಾರು ಮಾರಾಟ, ಸ್ಕೂಟರ್ ಮಾರಾಟ, ಫರ್ನಿಚರ್ ಮಾರಾಟ ಮಾಡುವವರವರೆಗೆ ಎಲ್ಲಾ ಬಗೆಯ ವ್ಯಾಪಾರಿಗಳೂ ಸಾರ್ವಜನಿಕರ ಫುಟ್ ಪಾತ್ ಅನ್ನು ಅತಿಕ್ರಮಿಸಿಕೊಂಡಿದ್ದಾರೆ.

 ಫುಟ್‌ಪಾತ್‌ನಲ್ಲೇ ವಾಹನ ನಿಲುಗಡೆ: 

ಜೊತೆಗೆ ಮುಖ್ಯರಸ್ತೆ ಕೆಲವು ಅಂಗಡಿ ಮಾಲೀಕರೂ ಶೀಟ್ ಹಾಕಿಕೊಂಡು ತಮ್ಮ ಅಂಗಡಿಗಳನ್ನು ಫುಟ್ ಪಾತ್ ವರೆಗೂ ವಿಸ್ತರಿಸಿಕೊಂಡಿದ್ದಾರೆ. ಕೆಲವೆಡೆ ಜೆಸಿಬಿ ಯಂತ್ರ, ರಿಗಿಂಗ್ ಯಂತ್ರಗಳನ್ನೂ ಬಾಡಿಗೆ ನೀಡುವವರು ತಮ್ಮ ವಾಹನಗಳನ್ನು ಫುಟ್‌ಪಾತ್ ನಲ್ಲಿ ದಿನಗಟ್ಟಲೆ ನಿಲ್ಲಿಸಿಕೊಳ್ಳುತ್ತಿದ್ದಾರೆ.

 ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ: 

ಬಹುತೇಕ ಅಂಗಡಿ ಮುಂಗಟ್ಟುಗಳಿಗೆ ಆಗಮಿಸುವ ವಾಹನ ಸವಾರರು ಹಾಗೂ ಖಾಸಗಿ ಸಾರಿಗೆ ವಾಹನಗಳು ರಸ್ತೆಯನ್ನು ಅತಿಕ್ರಮಿಸಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿರು ಸಂಚರಿಸಬೇಕಾದ ಫುಟ್‌ಪಾತ್ ಒತ್ತುವರಿಯಾಗಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.

 ಅಪಘಾತಗಳಿಗೆ ಕಾರಣ: 

ಫುಟ್ ಪಾತ್ ಇಲ್ಲದ ಪರಿಣಾಮ ಜನರು ರಸ್ತೆ ಮಧ್ಯದಲ್ಲಿಯೇ ವಾಹನಗಳ ನಡುವೆ ತೂರಿಕೊಂಡು ನಡೆಯಬೇಕಿದೆ. ಇದರಿಂದ ನಿತ್ಯ ಒಂದಲ್ಲ ಒಂದು ಕಡೆ ಅಪಘಾತಗಳು ಸಂಭವಿಸುತ್ತಿವೆ. ಪ್ರವಾಸಿ ಮಂದಿರ ವೃತ್ತದಲ್ಲಿ ಹಲವು ಜನರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿವೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆಯಿದ್ದರೂ ಪುರಸಭೆಯಾಗಲೀ, ಪೊಲೀಸ್ ಇಲಾಖೆಯಾಗಲೀ ಫುಟ್ ಪಾತ್ ಒತ್ತುವರಿ ತೆರವುಗೊಳಿಸಿ ಜನಸಂಚಾರಕ್ಕೆ ಸುಗಮ ದಾರಿ ಮಾಡಿಕೊಡುವ ಪ್ರಯತ್ನ ಮಾಡುತ್ತಿಲ್ಲ.

ಫುಟ್ ಪಾತ್ ನಲ್ಲಿ ವ್ಯಾಪಾರಿಗಳ ತೆರವು ವೇಳೆ ರಾಜಕೀಯ ಒತ್ತಡಗಳು ಬರುತ್ತಿವೆ. ಪಟ್ಟಣಕ್ಕೆ ನಿತ್ಯ ಆಗಮಿಸುವ ಸಾವಿರಾರು ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತವನ್ನು ಬಲಿಕೊಡಲಾಗುತ್ತಿದೆ. ಪುರಸಭೆ ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕರ ಹಿತದೃಷ್ಠಿಯಿಂದ ಫುಟ್ ಪಾತ್ ತೆರವುಗೊಳಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ಪುರಸಭೆಯ ವತಿಯಿಂದ ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಸಭೆ ನಡೆಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಯಾಗದಂತೆ ತಮ್ಮ ಅಂಗಡಿಗಳನ್ನು ಸ್ವಲ್ಪ ಹಿಂದಕ್ಕೆ ಹಾಕಿಕೊಳ್ಳಲು ಸೂಚಿಸಲಾಗಿದೆ. ಅಲ್ಲದೇ ವ್ಯಾಪಾರಿಗಳನ್ನು ಒಂದೇ ಕಡೆಗೆ ಸ್ಥಳಾಂತರಿಸಲು ಯೋಜಿಸಿ ಸೂಕ್ತ ಜಾಗ ಹುಡುಕಲಾಗುತ್ತಿದೆ. ಇದರಿಂದ ಫುಟ್ ಪಾತ್ ಸಮಸ್ಯೆ ಬಗೆಹರಿದು ಪಾದಚಾರಿಗಳ ಸುಗಮ ಓಡಾಡಕ್ಕೆ ದಾರಿಯಾಗುತ್ತದೆ.

 ಸತೀಶ್ , ಪುರಸಭೆ ಮುಖ್ಯಾಧಿಕಾರಿ 

ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವ ವೇಳೆ ರಾಜಕಾರಣಿಗಳ ಮಧ್ಯ ಪ್ರವೇಶದಿಂದ ತೊಂದರೆಯಾಗುತ್ತಿದೆ. ಪಟ್ಟಣಕ್ಕೆ ಬರುವ ಸಾವಿರಾರು ಜನರು ನಿತ್ಯ ಅನುಭವಿಸುವ ಸಂಕಷ್ಟವನ್ನು ಕಾಣದ ರಾಜಕಾರಣಿಗಳಿಗೆ ಬಡ ವ್ಯಾಪಾರಿಗಳ ಮೇಲೆ ಬರುತ್ತದೆ. ಕೂಡಲೇ ಪುರಸಭೆ ಹಾಗೂ ಪೊಲೀಸ್ ಇಲಾಖೆ ಪುಟ್ ಪಾತ್ ನಲ್ಲಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.

 ಮಂಜುನಾಥ್ , ಪಟ್ಟಣದ ನಿವಾಸಿ 

Latest Videos
Follow Us:
Download App:
  • android
  • ios