* ಪ್ಯಾಸೆಂಜರ್‌ ರೈಲಿನಂತೆ ನಿಧಾನವಾಗಿ ಮೋದಿ ಸರ್ಕಾರ ಓಡಲಿದೆ* ಮೋದಿ ವಾಟ್ಸಾಪ್‌ ಡಿಜಿಟಲ್‌ ಮೀಡಿಯಾದಿಂದ ಪ್ರಧಾನಿ ಆಗಿಲ್ಲ* ಆರ್‌ಎಸ್‌ಎಸ್‌ ನಿಂದ ಪ್ರಧಾನಿಯಾದ ನರೇಂದ್ರ ಮೋದಿ  

ಬೆಳಗಾವಿ(ಜು.09): ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ನಾಲ್ವರು ಮಂತ್ರಿ ಆಗಿರುವುದು ನಿಷ್ಪ್ರಯೋಜಕ. ನಾಲ್ಕು ಸಚಿವ ಸ್ಥಾನ ಸಿಕ್ಕರೂ ರಾಜ್ಯಕ್ಕೆ ಯಾವುದೇ ಲಾಭವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ. 

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅನನುಭವಿಗಳೇ ಹೆಚ್ಚಿರುವ ಸಂಪುಟದಲ್ಲಿ ಅಭಿವೃದ್ಧಿ ವೇಗ ಮತ್ತಷ್ಟು ಕುಂಠಿತಗೊಳ್ಳಲಿದೆ. ಈ ಮೊದಲು ಕೇಂದ್ರದ ಅಭಿವೃದ್ಧಿ ವೇಗ ಶೇ. 50ರಷ್ಟು ಮಾತ್ರ ಇತ್ತು. ಇದರ ವೇಗ ಶೇ.30ಕ್ಕೆ ಕುಸಿಯಲಿದೆ. ಇನ್ಮುಂದೆ ಪ್ಯಾಸೆಂಜರ್‌ ರೈಲಿನಂತೆ ನಿಧಾನವಾಗಿ ಮೋದಿ ಸರ್ಕಾರ ಓಡಲಿದೆ ಎಂದು ಟೀಕಿಸಿದ್ದಾರೆ. 

ರಾಜ್ಯದ ಇನ್ನೂ ನಾಲ್ವರು ಸಂಸದರನ್ನು ಸಚಿವರನ್ನಾಗಿ ಮಾಡಿದರೂ ಯಾವುದೇ ಲಾಭವಾಗುವುದಿಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಪ್ರಧಾನ ಮಂತ್ರಿಗಳಲ್ಲೇ ಇಲ್ಲ. ಟೀಮ್‌ ಲೀಡರ್‌ ಇಚ್ಛಾಶಕ್ತಿ ಹೊಂದಿದ್ದರೇ ಮಾತ್ರ ಕೆಲಸ ಸರಿಯಾಗಿ ನಡೆಯುತ್ತದೆ. ಇಲ್ಲದಿದ್ದರೇ ಅವರ ಕೆಳಗಿನವರು ಏನು ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಪ್ರಧಾನಮಂತ್ರಿಯನ್ನು ಇನ್ನೂವರೆಗೂ ಯಾವ ಭಾಗದ ಮಂತ್ರಿಗಳು ಸರಿಯಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ. ಸೇನಾಪತಿ (ಪ್ರಧಾನಿ) ಸ್ಥಾನದಲ್ಲಿರುವ ಮೋದಿಯವರೇ ಫೇಲ್ಯೂರ್‌ ಆದಾಗ, ಇನ್ನೂ ಅವರ ಕೆಳಗಿರುವ ಸೈನಿಕರಿಂದ (ಸಚಿವರು) ಏನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕ್ರೆಡಿಟ್‌ ರಾಜಕೀಯ ಕಾಂಗ್ರೆಸ್‌ಗೆ ಗೊತ್ತಿಲ್ಲ: ಲಕ್ಷ್ಮೀ ಹೆಬ್ಬಾಳಕರ

ಕೋವಿಡ್‌ ನಿರ್ವಹಣೆ ಹಾಗೂ ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಸುಪ್ರೀಂ ಕೋರ್ಟ ಆದೇಶ ಮಾಡದೇ ಹೋಗಿದ್ದರೆ 1000 ಟನ್‌ ಆಕ್ಸಿಜನ್‌ ನಮಗೆ ಸಿಗುತ್ತಿರಲಿಲ್ಲ. ಮೊದಲು ಕೇವಲ 500 ಟನ್‌ ಆಕ್ಸಿಜನ್‌ ನೀಡುತ್ತಿದ್ದರು. ಆದರೆ, ಸುಪ್ರೀಂ ಕೋರ್ಟ ಆದೇಶದಿಂದ ನಾವು ಹೆಚ್ಚು ಆಕ್ಸಿಜನ ಪಡೆಯುವಂತಾಯಿತು ಎಂದರು.

ಕೇಂದ್ರ ಸರ್ಕಾರದವರು ಒಮ್ಮೆ ಹೆಚ್ಚು ಲಸಿಕೆ ಪೂರೈಕೆ ಮಾಡುವುದು, ಮತ್ತೊಮ್ಮೆ ಕಡಿಮೆ ನೀಡುವುದು ಮಾಡುತ್ತಿದ್ದಾರೆ. ಹೀಗಾದರೇ ಎಲ್ಲರಿಗೂ ಲಸಿಕೆ ನೀಡಲು ಇನ್ನೂ 2 ವರ್ಷ ಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅವರ ಶಾಸಕರೇ ಮುಖ್ಯಮಂತ್ರಿಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು, ಸಚಿವರು ಸರ್ಕಾರ ನಡೆಸಲು ಅಸಮರ್ಥರಾಗಿದ್ದಾರೆ. ಕಾಂಗ್ರೆಸ್‌ನಿಂದ ಇದನ್ನು ಜನರ ಗಮನಕ್ಕೆ ತರುವ ಕಾರ್ಯ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಸಿಎಂ ಅಭ್ಯರ್ಥಿ ವಿಚಾರ ಅಪ್ರಸ್ತುತ

ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಸದ್ಯ ಅಪ್ರಸ್ತುತವಾಗಿದೆ. ಯಾರು ಸಿಎಂ ಆಗುತ್ತೇನೆ ಎಂದು ಎಲ್ಲಿ ಹೇಳಿದ್ದಾರೆ. ಸಿಎಂ ಸ್ಥಾನ ವಿಚಾರವಾಗಿ ಹಿಂದಿನ ಸಾಲಿನಲ್ಲಿ ಕುಳಿತು ಸೀಟಿ ಹೊಡೆದರೆ ನಾವೇನೂ ಮಾಡಬೇಕು. ಮುಂದಿನ ಸಾಲಿನಲ್ಲಿ ಇರುವವರು ಯಾರು ಸಿಎಂ ಆಗುತ್ತೇನೆ ಎಂದು ಹೇಳಿದ್ದಾರಾ ಎಂದು ಪ್ರಶ್ನಿಸಿದ ಸತೀಶ ಜಾರಕಿಹೊಳಿ, ಸಿಎಂ ಯಾರು ಆಗಬೇಕೆಂದು ಅಭಿಮಾನಿಗಳು ಹೇಳಿದರೆ ಆಗುವುದಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್‌, ಶಾಸಕರು ತೀರ್ಮಾನ ಮಾಡುತ್ತಾರೆ ಎಂದರು.

ಮೋದಿ ಅವರು ವಾಟ್ಸಾಪ್‌ ಡಿಜಿಟಲ್‌ ಮೀಡಿಯಾದಿಂದ ಪ್ರಧಾನಿ ಆಗಿಲ್ಲ. ಭಾಷಣದಿಂದಲೂ ಪ್ರಧಾನಿಯಾಗಿಲ್ಲ. ಮೋದಿ ಪ್ರಧಾನಮಂತ್ರಿಯಾಗಿದ್ದು ಸಂಘದಿಂದ. ಆರ್‌ಎಸ್‌ಎಸ್‌ಗೆ ನೂರು ವರಷದ ಇತಿಹಾಸವಿದೆ. ಸಂಘದಿಂದ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್‌, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್‌, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ, ನಗರ ಘಟಕದ ಅಧ್ಯಕ್ಷ ರಾಜು ಸೇಠ್‌, ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಮತ್ತಿತರರು ಉಪಸ್ಥಿತರಿದ್ದರು.