* ನಮ್ಮ ಪಕ್ಷಕ್ಕೆ ತನ್ನದೆಯಾದ ಸಿದ್ಧಾಂತವಿದೆ* ಕಾಂಗ್ರೆಸ್‌ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದು, ನಮಗೆ ಜನ ಬೆಂಬಲ ಸಿಗಲಿದೆ* ಬೆಳಗಾವಿ ಮತ್ತು ಹುಬ್ಬಳ್ಳಿ ಸೇರಿದಂತೆ ಎಲ್ಲೆಡೆ ಸಮಿತಿ ನೇಮಕ  

ಬೆಳಗಾವಿ(ಆ.21): ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಮೇಲೆ ಎದುರಿಸಬೇಕೋ ಅಥವಾ ಬೇಡವೋ ಎಂಬುವುದರ ಬಗ್ಗೆ ಕಾಂಗ್ರೆಸ್‌ ಇದುವರೆಗೆ ನಿರ್ಧಾರ ಕೈಗೊಂಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಮೇಲೆ ನಡೆಸಬೇಕೋ ಬೇಡವೋ ಎಂಬುದರ ಬಗ್ಗೆ ಅಂತಿಮವಾಗಿ ಇನ್ನೂ ತೀರ್ಮಾನಿಸಿಲ್ಲ. ಬೇರೆಯವರಂತೆ ನಾವು ಮಾಡಲ್ಲ. ನಮ್ಮ ಪಕ್ಷಕ್ಕೆ ತನ್ನದೆಯಾದ ಸಿದ್ಧಾಂತವಿದೆ. ಬೆಳಗಾವಿ ಮತ್ತು ಹುಬ್ಬಳ್ಳಿ ಸೇರಿದಂತೆ ಎಲ್ಲೆಡೆ ಸಮಿತಿ ನೇಮಿಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದು, ನಮಗೆ ಜನ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

'ಮುಂದಿನ ಚುನಾವಣೆಗೆ ಬಿಜೆಪಿಗೆ ಹೋದ 17 ಜನಕ್ಕಿಲ್ಲ ಟಿಕೆಟ್ '

ಶೇ.7.5ರಷ್ಟು ಮೀಸಲಾತಿಯನ್ನು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಸಿಎಂ ಬೊಮ್ಮಾಯಿ ಅವರಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಅಲ್ಲದೇ ಇದಕ್ಕೆ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ಅವರು ಅಧ್ಯಯನ ಮಾಡಿ, ಕ್ರಮಕೈಗೊಳ್ಳಲಿ. ಯಾವುದೇ ಸರ್ಕಾರವಿದ್ದರೂ ಇಚ್ಛಾಶಕ್ತಿ ಕೊರತೆಯಿಂದ ಬೇಡಿಕೆ ಈಡೇರಿಲ್ಲ. ಆದರೆ ಬಿಜೆಪಿ ಸರ್ಕಾರವಾದರೂ ಈಡೇರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.