ಬೆಳಗಾವಿ(ನ.08): ಎಲ್ಲ ಪಕ್ಷಗಳಲ್ಲಿಯೂ ಗುಂಪುಗಾರಿಕೆ ಇದ್ದೆ ಇರುತ್ತದೆ. ಅದೇನು ಹೊಸದಲ್ಲ. ಬಿಜೆಪಿಯಲ್ಲಿಯೂ ಮೂರು ಗುಂಪುಗಳಿವೆ. ದೆಹಲಿಯಲ್ಲಿ ಒಂದು, ಕರ್ನಾಟಕದಲ್ಲಿ ಎರಡು ಗುಂಪುಗಳಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ನಾಯಕತ್ವದಲ್ಲಿ ಇರಲಿದ್ದಾರೆ. ಆದರೆ, ಪಕ್ಷ ಎಂದು ಬಂದಾಗ ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಾರೆ. ಶಿರಾ, ಆರ್‌ಆರ್‌ ನಗರ ಎರಡೂ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದರು.

'ಸಿಎಂ ಬದಲಾವಣೆ ಸಾಧ್ಯವಿಲ್ಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ'

ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ:

ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವುದು ರಾಜಕೀಯ ಪ್ರೇರಿತವಾಗಿದೆ. ವಿನಯ್‌ ಕುಲಕರ್ಣಿ ಅವರನ್ನು ಬಿಜೆಪಿಯವರು ಮೊದಲಿನಿಂದಲೂ ಗುರಿಯಾಗಿಸಿಕೊಂಡು ಬಂದಿದ್ದರು. ಅವರು ಈಗ ಯಶಸ್ವಿಯಾಗಿದ್ದಾರೆ. ಆದರೆ, ಈ ವಿಚಾರವಾಗಿ ಆರೋಪ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಈ ವಿಚಾರದಲ್ಲಿ ಕೋರ್ಟ್‌ ತೀರ್ಪು ಅಂತಿಮವಾಗಿರುತ್ತದೆ ಎಂದು ಹೇಳಿದರು.