ಕೋಮು ಸಾಮರಸ್ಯ ಕದಡಲು ಯತ್ನ: ಈಶ್ವರ ಖಂಡ್ರೆ
ಬೀದರ್ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ, ಜನತೆ ತಾಳ್ಮೆಯಿಂದ ಶಾಂತಿ ಕಾಪಾಡಲು ಈಶ್ವರ ಖಂಡ್ರೆ ಮನವಿ
ಭಾಲ್ಕಿ(ಅ.08): ಹಲವು ಶತಮಾನಗಳಿಂದ ಹಿಂದೂ, ಮುಸ್ಲಿಂ, ಸಿಖ್ ಮತ್ತು ಇಸಾಯಿಗಳ ಭಾವೈಕ್ಯತೆಯ ತಾಣವಾಗಿ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೀದರ್ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕದಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ, ಬೀದರ್ ಜನತೆ ತಾಳ್ಮೆಯಿಂದ ಶಾಂತಿ ಕಾಪಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ. ಬೀದರ್‌ನಲ್ಲಿ ದಸರಾ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲವು ಕಿಡಿಗೇಡಿ ಯುವಕರು ಮೊಹಮ್ಮದ್ ಗವಾನ್ ಮದರಸಾಗೆ ನುಗ್ಗಿ ಕುಂಕುಮ ಹಚ್ಚಿ ಪೂಜೆ, ಘೋಷಣೆ ಕೂಗಿರುವುದು ಸರಿಯಲ್ಲ. ಸರ್ಕಾರ ಈ ರೀತಿಯ ಚಟುವಟಿಕೆಗಳಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಲಿ ಬೆಂಬಲ ನೀಡುವುದು ಸೂಕ್ತವಲ್ಲ. ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರದಿಂದ ಇದ್ದು, ಜಿಲ್ಲೆಯಲ್ಲಿ ಶಾಂತಿ ಕದಡದಂತೆ ಜಾಗೃತರಾಗಿರಬೇಕು ಎಂದು ಒತ್ತಾಯಿಸಿದ್ದಾರೆ. ಬೀದರ್‌ನ ಮಹಮ್ಮದ್ ಗಾವಾನ್ ಮದರಸಾ 15ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ನಿರ್ಮಾಣವಾದ ಇಂಡೋ-ಇಸ್ಲಾಮಿಕ್ ಶೈಲಿಯ ಭವ್ಯ ಕಟ್ಟವಾಗಿದೆ. ಪ್ರಸ್ತುತ ಈ ತಾಣ ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿದೆ. ಮಹ್ಮದ್ ಗಾವಾನ್ ಅವರು ಶಿಕ್ಷಣ ಸಂಸ್ಥೆಯೊಂದರ ಅಗತ್ಯತೆ ಮನಗಂಡು ಅಂದು ಈ ಮದರಸಾವನ್ನು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ಇಂತಹ ಐತಿಹಾಸಿಕ ಮತ್ತು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಟ್ಟತಾಣಗಳಲ್ಲಿ ಇಂತಹ ಕೃತ್ಯಗಳು ನಡೆಯುವುದು ಸರಿಯಲ್ಲ. ಯಾವುದೇ ಧರ್ಮದವರ ಮನಸ್ಸಿಗೆ ನೋವಾಗುವಂತೆ ಮತ್ತೊಂದು ಧರ್ಮದವರು ನಡೆದುಕೊಳ್ಳಬಾರದು. ಬಸವಾದಿ ಪ್ರಮಥರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವವನ್ನು ಸಾರಿದ್ದಾರೆ. ಸಮ ಸಮಾಜ ನಿರ್ಮಾಣ ಮಾಡುವ ಪರಿಕಲ್ಪನೆ ಕಟ್ಟಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬೀದರ್‌ನಿಂದ ತಿರುಪತಿಗೆ ಪ್ರಾಯೋಗಿಕ ರೈಲು ಸೇವೆ: ಕೇಂದ್ರ ಸಚಿವ ಖೂಬಾ
ಬಸವಾದಿ ಶರಣರ ಪಾದಸ್ಪರ್ಶದಿಂದ ಪಾವನವಾದ ಬೀದರ್ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ನಡೆಯಬಾರದು. ಶಾಂತಿಗೆ ಭಂಗ ಬರಬಾರದು. ಈ ಘಟನೆಯಿಂದ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಈಗಲಾದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಶಾಂತಿಗೆ ಭಂಗ ಬಾರದಂತೆ ಎಚ್ಚರ ವಹಿಸಬೇಕೆಂದು ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.