ಉಪಚುನಾವಣಾ ಕದನ: 'ಪಕ್ಷಾಂತರಿಗಳಿಗೆ ಜನತೆ ತಕ್ಕ ಪಾಠ ಕಲಿಸ್ತಾರೆ'
ರಾಯಚೂರು ಜಿಲ್ಲೆಯ ಮಸ್ಕಿ ಉಪಚುನಾವಣೆಲ್ಲಿ ಕಾಂಗ್ರೆಸ್ ಅಭ್ಯರ್ಥಿ ತುರ್ವಿಹಾಳಗೆ ಗೆಲುವು ಖಚಿತ| ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಜನಪ್ರಿಯ ಯೋಜನೆಗಳೇ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗೆಲುವಿಗೆ ವರದಾನ: ಧ್ರುವನಾರಾಯಣ|
ಸಿಂಧನೂರು(ಮಾ.25): ಪಕ್ಷಾಂತರಗೊಂಡು ಈಗ ಬಿಜೆಪಿಯಿಂದ ಮಸ್ಕಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಾಪಗೌಡ ಪಾಟೀಲ್ ಮತ್ತು ಅವರ ಬೆಂಬಲಕ್ಕಾಗಿ ಕಾಂಗ್ರೆಸ್ ತೊರೆದಿರುವ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪಗೆ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಮತ್ತು ಅಧಿಕಾರದ ಆಸೆಗಾಗಿ ಬಿಜೆಪಿ ಸೇರ್ಪಡೆಯಾಗಿರುವ ಪ್ರತಾಪಗೌಡ ಪಾಟೀಲ್, ವಿರೂಪಾಕ್ಷಪ್ಪ ಕಾಂಗ್ರೆಸ್‌ನಿಂದ ಶಾಸಕರಾಗಿ, ಸಂಸದರಾಗಿ ಅಧಿಕಾರ ಅನುಭವಿಸಿ ಹಕ್ಕಿಯಂತೆ ಪಕ್ಷದಿಂದ ಪಕ್ಷಕ್ಕೆ ಹಾರಾಡುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಎಸ್‌ಆರ್ ಸೇರಿ ಅಲ್ಲಿ ಹೋದದ್ದು ತಪ್ಪಾಯಿತು ಎಂದು ಹೇಳಿ ನಂತರ ಬಿಜೆಪಿ ಸೇರ್ಪಡೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್‌ಗೆ ಬಂದಿದ್ದರು. ಈಗ ಪುನಃ ಬಿಜೆಪಿಗೆ ಹೋಗಿದ್ದಾರೆ. ಇವರಿಗೆ ಯಾವುದೇ ತತ್ವ ಸಿದ್ಧಾಂತ, ಬದ್ಧತೆ ಇಲ್ಲ ಎಂದು ಟೀಕಿಸಿದರು.
ಮಸ್ಕಿ ಉಪಕದನ: ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡರಿಂದ ನಾಮಪತ್ರ ಸಲ್ಲಿಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಜನಪ್ರಿಯ ಯೋಜನೆಗಳು, ಯುಪಿಎ ಸರ್ಕಾರದ ಆಹಾರ ಭದ್ರತೆ, ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ ಹಕ್ಕು ಇಂತಹ ಹಲವಾರು ಜನಪ್ರಿಯ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಗೆಲುವಿಗೆ ವರವಾಗಲಿವೆ. ಇವರಿಗೆ ಕ್ಷೇತ್ರದಾದ್ಯಂತ ಎಲ್ಲ ಗ್ರಾಮಗಳಲ್ಲಿ ಜನರು ಚುನಾವಣೆಗೆ ದೇಣಿಗೆ ನೀಡಿ, ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಕ್ಷೇತ್ರದ ಬಹುತೇಕ ಮತದಾರರು ಬಸನಗೌಡರ ಪರವಾಗಿ ಸ್ವಯಂ ಪ್ರೇರಿತರಾಗಿ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು. ಪಕ್ಷದ ಮುಖಂಡರಾದ ಎಚ್.ಎನ್.ಬಡಿಗೇರ, ಅನೀಲ್ ಕುಮಾರ, ಖಾಜಿ ಮಲ್ಲಿಕ್ ವಕೀಲ, ಪರ್ವತಪ್ಪ, ಲಕ್ಷ್ಮಣ, ಬಸವರಾಜ ಪಾಟೀಲ್, ರಮೇಶ ಇದ್ದರು.