ಬಳ್ಳಾರಿ(ಫೆ.03): ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ಇಡೀ ದೇಶವನ್ನು ಖಾಸಗಿಯವರ ಕೈಗಿಡುವ ಹುನ್ನಾರ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂತೇಶ್‌ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಮಾ ವಲಯದಲ್ಲಿನ ವಿದೇಶ ಬಂಡಾಳ ಹೂಡಿಕೆ (ಎಫ್‌ಡಿಐ)ಯನ್ನು ಶೇ. 49ರಿಂದ ಶೇ. 74ಕ್ಕೆ ಏರಿಸಲಾಗಿದೆ. ಬಂಡವಾಳ ಹಿಂತೆಗೆತಕ್ಕೆ ಪ್ರಸ್ತಾಪಿಸಲಾಗಿದೆ. ವಿಮೆ, ಬ್ಯಾಂಕ್‌ಗಳನ್ನು ಖಾಸಗಿಯವರ ಕೈಗಿಡುವ ಹುನ್ನಾರ ನಡೆದಿದೆ. ರೈಲ್ವೆ, ಅರಣ್ಯ, ಕೃಷಿ ಇತ್ಯಾದಿ ಸರ್ಕಾರಿ ಇಲಾಖೆಗಳ ಜಮೀನು ಖಾಸಗಿಯವರ ಪಾಲಾಗಲಿದೆ. ಇದರಿಂದ ಬಡವರ ಬದುಕು ಮತ್ತಷ್ಟು ಹದಗೆಡಲಿದೆ ಎಂದು ತಿಳಿಸಿದ್ದಾರೆ.

ವಾಡಾ ಅಧ್ಯಕ್ಷ ಸ್ಥಾನ ನಾನೊಲ್ಲೆ: ಸಿಎಂ ಬಿಎಸ್‌ವೈಗೆ ಪತ್ರ ಬರೆದ ಬಿಜೆಪಿ ಮುಖಂಡ

2018ರ ಹಣಕಾಸು ವರ್ಷದಲ್ಲಿ ಶಿಕ್ಷಣ, ಆರೋಗ್ಯ ಒಳಗೊಂಡಂತೆ 42 ಸೆಸ್‌ಗಳನ್ನು ಹಾಕಿದ್ದ ಮೋದಿ ಸರ್ಕಾರ ಈ ಮೂಲಕ 2.5 ಲಕ್ಷ ಕೋಟಿ ಸಂಗ್ರಹ ಮಾಡಿತ್ತು. ಆದರೆ, ಆ ಮೊತ್ತವನ್ನು ಮರಳಿ ಸಂಬಂಧಪಟ್ಟ ಇಲಾಖೆಗಳ ಅಭಿವೃದ್ಧಿಗೆ ವೆಚ್ಚ ಮಾಡಲೇ ಇಲ್ಲ. ಕೃಷಿ ಸೆಸ್‌ ಎಂದು ಅನೇಕ ತೆರಿಗೆಗಳನ್ನು ಪ್ರಸ್ತಾಪಿಸಲಾಗಿದೆ. ಕೃಷಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹವಾಗುತ್ತದೆ. ಆದರೆ, ಕೃಷಿಗೆ ನಯಾ ಪೈಸೆ ವೆಚ್ಚ ಮಾಡುವುದಿಲ್ಲ. ಇದೊಂದು ನೇರ ವಂಚನೆಯ ಕೆಲಸವಾಗಿದೆ ಎಂದು ದೂರಿದ್ದಾರೆ.

ವಿತ್ತೀಯ ಕೊರತೆ ಶೇ. 6.6 ಎಂದು ಅಂದಾಜಿಸಿದ್ದಾರೆ. ಇದಕ್ಕೆ ನೇರವಾಗಿ ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯನ್ನು ನಿಭಾಯಿಸುವ ಹೊಣೆಗಾರಿಕೆಯ ವೈಫಲ್ಯ ಸರ್ಕಾರ ಕಂಡಿದೆ ಎಂಬುದು ಗೊತ್ತಾಗುತ್ತದೆಯಲ್ಲದೆ, ತನ್ನ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣಚಿಕೊಂಡಿದೆ ಎಂದು ಗೊತ್ತಾಗುತ್ತದೆ. ಶೇ.1 ಪ್ರಮಾಣದಲ್ಲಿರುವ ಅತಿ ಶ್ರೀಮಂತರಿಗೆ ಶೇ. 2 ಪ್ರಮಾಣದ ಸಂಪತ್ತು ತೆರಿಗೆ ವಿಧಿಸಿ ಆ ಮೂಲಕ ನೇರ ತೆರಿಗೆ ಸಂಗ್ರಹಿಸಬಹುದಾಗಿತ್ತು. ಆದರೆ, ಈ ಕುರಿತು ಪ್ರಸ್ತಾಪವೇ ಮಾಡಲಾಗಿಲ್ಲ. ಬದಲಿಗೆ ಈ ಬಾರಿಯ ಬಜೆಟ್‌ನ ಪ್ರಕಾರ ಪರೋಕ್ಷ ತೆರಿಗೆ ಪ್ರಮಾಣ ತುಂಬಾ ಕಡಿಮೆಯಾಗಲಿದೆ. ಅಂದರೆ ಅತಿ ಶ್ರೀಮಂತರು ಮತ್ತುಷ್ಟು ಶ್ರೀಮಂತರಾಗಲು, ಬಡವರು ಮತ್ತಷ್ಟೂ ಬಡವರಾಗಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಎಂ.ಪಿ. ವೀಣಾ ಮಹಾಂತೇಶ್‌ ಅವರು ಬಜೆಟ್‌ನ ಲೋಪಗಳ ಕುರಿತು ವಿಶ್ಲೇಷಿಸಿದ್ದಾರೆ.