ಸಂಸದೆ ಶೋಭಾ ಕರಂದ್ಲಾಜೆ ಕೂಡಲೆ ರಾಜೀನಾಮೆಗೆ ಆಗ್ರಹ
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಸಂಸದೆ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.
ಮೈಸೂರು (ಡಿ.10): ಭಯೋತ್ಪಾದಕರು ಬಂದ್‌ನಲ್ಲಿ ಭಾಗವಹಿಸಿದ್ದಾರೆ ಎನ್ನುವ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಅವರು ಅನ್ನದಾತರನ್ನು ಅವಮಾನಿಸಿದ್ದಾರೆ. ಅವರು ಸಂಸದರಾಗಿ ಮುಂದುವರೆಯುವ ಯಾವ ನೈತಿಕತೆಯೂ ಇಲ್ಲ. ಕೂಡಲೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಆಗ್ರಹಿಸಿದರು.
ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವರು ಹೇಳುತ್ತಾರೆ. ರೈತರು ಹೇಡಿಗಳಲ್ಲ ನೀವು ಹೇಡಿಗಳು. ಬಿಜೆಪಿ ನಾಯಕರಿಗೆ ರೈತರ ಮೇಲೆ ಗೌರವವಿಲ್ಲ. ಒಬ್ಬ ಶಾಸಕರು, ಸಂಸದರು ಮಹಿಳೆಯರ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಆಡಳಿತದಿಂದಾಗಿ ಯಾರು ನೆಮ್ಮದಿಯಿಂದಿಲ್ಲ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ, ಕೈಗೆ ದೊಡ್ಡ ಶಕ್ತಿ ಬಂದಾಂತಾಗಿದೆ ಎಂದ ಡಿಕೆಶಿ ...
ಕೃಷಿ ಕಾಯ್ದೆ ವಿರುದ್ಧ ರೈತರು ಕರೆ ನೀಡಿದ್ದ ಭಾರತ್ ಬಂದ್‌ಗೆ ಮುಖ್ಯಮಂತ್ರಿಗಳು ಬಂದ್ ವಿಫಲವಾಗಿದೆ ಎಂದು ನೀಡಿರುವ ಹೇಳಿಕೆ ಅಮಾನುಷವಾಗಿ. ರೈತರ ಹೆಸರಿನಲ್ಲಿ ಅಧಿಕಾರ ಹಿಡಿದ ಬಿಎಸ್‌ವೈ ಅವರ ನೇತೃತ್ವದ ಸರ್ಕಾರದಿಂದ ಇಂತಹ ಹೇಳಿಕೆ ಅಮಾನವೀಯ. ಬಂದ್ ಮಾಡಿದ ಮೇಲೆ ಚರ್ಚೆಗೆ ಬನ್ನಿ ಎನ್ನುವುದು ಹಾಸ್ಯಾಸ್ಪದ ಎಂದು ಅವರು ಕಿಡಿಕಾರಿದರು.
ಅದಾನಿ, ಅಂಬಾನಿ ದೊಡ್ಡ ಕಾರ್ಪೊರೇಟ್ ಕಂಪನಿ ಮಾಲೀಕರು ನೆಮ್ಮದಿಯಾಗಿದ್ದಾರೆ. ಆದರೆ, ರೈತರು, ಕಾರ್ಮಿಕರು, ಮಹಿಳೆಯರಿಗೆ ದೇಶದಲ್ಲಿ ರಕ್ಷಣೆ ಇಲ್ಲ. ಮಹಿಳೆಯರ ಮೇಲೆ ಅತ್ಯಾಚಾರ ನಿರಂತರವಾಗಿದೆ. ಈ ಎಲ್ಲದರ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದಿಂದ ಕರಪತ್ರವನ್ನು ಹಂಚುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮಹಿಳಾ ಘಟಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕರಪತ್ರವನ್ನು ಮುದ್ರಿಸಿ, ಪ್ರತಿ ಗ್ರಾಮಗಳಿಗೆ ತೆರಳಿ ಮನೆ ಮನೆಗೆ ಹಂಚಿ ಜನತೆಗೆ ಜನ ವಿರೋಧಿ ನೀತಿಯ ಬಗ್ಗೆ ಮನದಟ್ಟು ಮಾಡಿಕೊಡಲಾಗುವುದು.
ಸರ್ಕಾರ ಕಾಂಗ್ರೆಸ್ ಪಕ್ಷ ಪ್ರತಿಭಟಿಸಲು ಅವಕಾಶ ನೀಡುತ್ತಿಲ್ಲ. ಪ್ರತಿಕೃತಿ ದಹನ ಮಾಡಲು ಅವಕಾಶ ನೀಡುತ್ತಿಲ್ಲ. ಹೊರಗಡೆ ಪ್ರತಿಭಟಿಸಿದರೆ ಜೈಲಿಗೆ ಹಾಕುವುದಾಗಿ ಪೊಲೀಸರು ಬೆದರಿಕೆ ಹಾಕುತ್ತಾರೆ. ಬಿಜೆಪಿಯವರು ಪೊಲೀಸರ ಮೂಲಕ ನಮ್ಮ ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ಅವರು ದೂರಿದರು.
ಕಾಂಗ್ರೆಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಪದಾಧಿಕಾರಿಗಳಾದ ಆರ್. ಪುಷ್ಪವಲ್ಲಿ, ಲತಾ ಮೋಹನ್, ಡಾ. ಸುಜಾತ ಇದ್ದರು.