'ಕೇಂದ್ರ ಸರ್ಕಾರದ ವಿರುದ್ಧ ಯಾರೇ ಮಾತನಾಡಿದ್ರೂ ದೇಶದ್ರೋಹಿ ಪಟ್ಟ'
ಕಲ್ಯಾಣ ಕರ್ನಾಟಕಕ್ಕೆ ಸತತ ಅನ್ಯಾಯ| ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಹೆಚ್ಚಿನ ಅನುದಾನ ತರುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಪುಷ್ಪಾ ಅಮರನಾಥ್| ಕಾಂಗ್ರೆಸ್ ಮಿಷನ್ ನಾರಿ ಶಕ್ತಿ ಅಭಿಯಾನ| ಬೂತ್ ಮಟ್ಟದಲ್ಲಿ 10 ಮಹಿಳೆಯರನ್ನು ಒಗ್ಗೂಡಿಸಿ ಸಂಘಟನೆ|
ಕಲಬುರಗಿ(ಜ.20): ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಪದೇ ಪದೆ ಅನ್ಯಾಯವಾಗುತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಅದನ್ನು ಸರಿಪಡಿಸಲು ಮುಂದಾಗುತ್ತಿಲ್ಲ, ಅಗತ್ಯ ಕ್ರಮ ಕೈಗೊಳ್ಳದೆ ರಾಜಕೀಯವಾಗಿ ಲಾಭಕ್ಕೋಸ್ಕರ ಮಾತ್ರ ನಾಚಿಕೆ ಬಿಟ್ಟು ವರ್ತಿಸುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಯಾರೇ ಮಾತನಾಡಿದ್ರೂ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ಕಲ್ಯಾಣ ಕರ್ನಾಟಕಕ್ಕೆ ಸತತ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಹೆಚ್ಚಿನ ಅನುದಾನ ತರುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಬದ್ಧತೆ ಇಲ್ಲ, ಮಾನ-ಮರ್ಯಾದೆಯಿಲ್ಲ. ನಾಚಿಕೆ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದೆ. ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದರು.
ಮಹಿಳೆಯರ ಕಲ್ಯಾಣದ ಬಗ್ಗೆ ಪ್ರಧಾನಿ ಮೋದಿಗೆ ಆಸಕ್ತಿಯಿಲ್ಲ. ಹೀಗಾಗಿ, ಮಹಿಳಾ ಮೀಸಲಾತಿ ಜಾರಿಗೆ ತರುತ್ತಿಲ್ಲ. ಶೇ.50ರಷ್ಟುಮಹಿಳೆಯರು ದೇಶದಲ್ಲಿದ್ದರೂ ರಾಜಕೀಯವಾಗಿ ಧ್ವನಿ ಎತ್ತಲಾಗುತ್ತಿಲ್ಲ. ಬೇಟಿ ಬಚಾವೋ ಬೇಟಿ ಪಡಾವೋ ಎಂದು ಬಿಜೆಪಿ ಹೇಳುತ್ತದೆ. ಆದರೆ, ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತದೆ ಎಂದರು.
ಕಲಬುರಗಿಯಲ್ಲಿ ನಿಲ್ಲದೆ ಓಡುತ್ತಿವೆ ರೈಲುಗಳು: ಇಲಾಖೆಯ ಅಲಕ್ಷತನಕ್ಕೆ ಜನ ಹೈರಾಣ
ಕಾಂಗ್ರೆಸ್ ಮಿಷನ್ ನಾರಿ ಶಕ್ತಿ ಅಭಿಯಾನ:
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಸಿಕ್ಕಿದ್ರೇ, ಅದು ಕಾಂಗ್ರೆಸ್‌ನಿಂದ ಮಾತ್ರ. ಕಾಂಗ್ರೆಸ್ನಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಪಕ್ಷದಲ್ಲಿಯೂ ಮಹಿಳಾ ಶಕ್ತಿ ಬಲವರ್ಧನೆ ಮಾಡ್ತಿದ್ದೇವೆ. ಮಿಷನ್ ನಾರಿ ಶಕ್ತಿ ಅಭಿಯಾನ ಮಾಡುತ್ತಿದ್ದೇವೆ. ಬೂತ್ ಮಟ್ಟದಲ್ಲಿ 10 ಮಹಿಳೆಯರನ್ನು ಒಗ್ಗೂಡಿಸಿ ಸಂಘಟನೆ ಮಾಡುತ್ತಿದ್ದೇನೆ ಎಂದರು. ಡಿಸಿಸಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಇದ್ದರು.