ಮೈಸೂರು (ಡಿ.11): ಮುಂದಿನ ಐದು ತಿಂಗಳಲ್ಲಿ ಬಿಜೆಪಿಯಲ್ಲಿ ಬದಲಾವಣೆ ಆಗಬಹುದು ಎಂದು ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತೊಂದು ನಾಟಕ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ವ್ಯಂಗ್ಯವಾಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವರಿಷ್ಠರು ಸಿಎಂ ಬದಲಾವಣೆ ಮಾಡಬಹುದು. ಆಗ ಯಡಿಯೂರಪ್ಪ 20 ಅಥವಾ 30 ಜನ ಕರೆದುಕೊಂಡು ಬಂದ್ರೆ ಆ ಸಮಯದಲ್ಲಿ ಅವರ ಜೊತೆ ಕುಮಾರಸ್ವಾಮಿ ಜೊತೆ ಸೇರಬಹುದು ಎಂದರು.

ಕುಮಾರಸ್ವಾಮಿ ಅವರ ಎಲ್ಲಾ ಆಟಗಳು ನಮಗೆ ಗೊತ್ತಿದೆ. ಕಾಂಗ್ರೆಸ್‌ ಮತ್ತೆ ಜೆಡಿಎಸ್‌ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ.ಈಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಜೆಡಿಎಸ್‌ ಬಣ್ಣ ಗೊತ್ತಾಗಿದೆ ಎಂದು ಅವರು ಹೇಳಿದರು. 

ಡಿಕೆಶಿ, ಎಚ್ಡಿಕೆ ಕುತಂತ್ರದಿಂದಾಗಿ ಸರ್ಕಾರ ಕೆಡವಲು ನೆರವಾದೆ: ಯೋಗೇಶ್ವರ್‌

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬರೀ ಸುಳ್ಳು ಹೇಳಿದ್ದರು. ಯಾರಾದರೂ ಅರಮನೆ ಬರೆದುಕೊಡಿ ಎಂದಿದ್ದರೆ ಓಕೆ ಅನ್ನುತ್ತಿದ್ದರು. ಮುಂದೆ ಯಾವುದೇ ಕಾರಣಕ್ಕೆ ಜೆಡಿಎಸ್‌ ಜೊತೆ ಹೊಂದಾಣಿಕೆ ಇಲ್ಲ. ಹೈಕಮಾಂಡ್‌ ಸಹ ಹೊಂದಾಣಿಕೆಗೆ ಹೇಳುವುದಿಲ್ಲ. ಈ ಬಗ್ಗೆ ಕೆಪಿಸಿಸಿಯಿಂದ ಎಐಸಿಸಿಗೆ 200 ಪುಟದ ವರದಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಜೆಡಿಎಸ್‌ ತೆಗೆದುಬಿಡಿ, ಬಿಜೆಪಿಯ ಬಿ ಟೀಂ ಎಂದು ಘೋಷಿಸಿ, ಇಲ್ಲ ಜನ ಜೋಕರ್‌ ಎನುತ್ತಾರೆ ಎಂದು ಲೇವಡಿ ಮಾಡಿದರು.