ಒಂದೇ ವಾರದಲ್ಲಿ ಕೊರೋನಾ ಸೋಂಕು ಗೆದ್ದು ಬಂದ ಕೊಟ್ಟೂರು ಠಾಣೆಯ ಮುಖ್ಯಪೇದೆ..!
ಸೋಂಕು ಕಾಣಿಸಿಕೊಂಡು 7 ದಿನಗಳಲ್ಲೇ ಗುಣಮುಖ| ಪಿ-3245 ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯಪೇದೆ| ಮುಖ್ಯಪೇದೆ ಕೋವಿಡ್-19 ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಹೊಸಪೇಟೆ ಕ್ವಾರೆಂಟೈನ್‌ನಲ್ಲಿರಿಸಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿದೆ|
ಜಿ..ಸೋಮಶೇಖರ
ಕೊಟ್ಟೂರು(ಜೂ.10): ಕೊರೋನಾ ರೋಗ ಅಂಟಿಕೊಂಡ ಒಂದು ವಾರದ ಅವಧಿಯಲ್ಲೇ ಸಂಪೂರ್ಣ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೂಲಕ ಹೀರೊ ಆಗಿದ್ದಾರೆ ಪಿ-3245 ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯಪೇದೆ.
ಕೊರೋನಾ ವಾರಿಯರ್ ಕೂಡಾ ಆಗಿದ್ದ ಈ ಮುಖ್ಯಪೇದೆಗೆ ಸೋಂಕು ಕಾಣಿಸಿಕೊಂಡ ಕಾರಣಕ್ಕಾಗಿ ಇಡೀ ಪೊಲೀಸ್ ಠಾಣೆಯ ಸಬ್ ಇನಸ್ಪೆಕ್ಟರ್ ಸೇರಿದಂತೆ 42 ಪೊಲೀಸರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅವರೆಲ್ಲರ ವರದಿ ನೆಗೆಟಿವ್ ಆಗಿ ಫಲಿತಾಂಶ ಹೊರಬಿದ್ದಿದೆ. ಅಲ್ಲದೆ ಮುಖ್ಯ ಪೇದೆಯ ತಂದೆ-ತಾಯಿ ಸೇರಿದಂತೆ ಅವರ ಪ್ರಥಮ ಹಂತದ ಸಂಪರ್ಕಿರೆಂದು ಗುರುತಿಸಿದ್ದ ಜಗಳೂರಿನ 29 ಜನರ ಟೆಸ್ಟ್ ಕೂಡಾ ನೆಗೆಟಿವ್ ಬಂದಿದೆ.
ಬಳ್ಳಾರಿ: ಕೊರೋನಾದಿಂದ ಗುಣಮುಖ, ಒಂದೇ ದಿನ 8 ಜನ ಡಿಸ್ಚಾರ್ಜ್
ಮುಖ್ಯಪೇದೆ ಕೋವಿಡ್-19 ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಹೊಸಪೇಟೆ ಕ್ವಾರೆಂಟೈನ್‌ನಲ್ಲಿರಿಸಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿದೆ. ಇಷ್ಟು ಶೀಘ್ರದಲ್ಲಿ ಸಂಪೂರ್ಣ ಗುಣಮುಖನಾಗಲು ಆಸ್ಪತ್ರೆ ಅಧೀಕ್ಷಕ ಡಾ. ಬಸರೆಡ್ಡಿ ಮತ್ತವರ ವೈದ್ಯ ತಂಡ ಕಾರಣ. ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದೆ ಗುಣಮುಖರಾಗುತ್ತೇವೆ ಎಂದು ವಿಶ್ವಾಸ ಮೂಡಿಸಿಕೊಂಡರೆ ರೋಗ ತಂತಾನೆ ನಿವಾರಣೆಯಾಗುತ್ತದೆ. ಯಾವುದೇ ಕಾರಣಕ್ಕೂ ಧೈರ್ಯ ಗುಂದಬಾರದು ಎಂಬ ತಮ್ಮ ಅನುಭವವನ್ನು ಮುಖ್ಯಪೇದೆ ಕನ್ನಡಪ್ರಭದೊಂದಿಗೆ ಹಂಚಿಕೊಂಡರು.
ರೋಗ ಅಂಟಿಕೊಂಡ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಸಹುದ್ಯೋಗಿಗಳು, ಇತರರು ನನ್ನಲ್ಲಿ ವಿಶ್ವಾಸವನ್ನು ತುಂಬಿ, ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿದರು. ಇವರೆಲ್ಲರ ಸಹಕಾರ, ಶುಭ ಹಾರೈಕೆಯಿಂದ ಸಂಪೂರ್ಣ ಗುಣ ಹೊಂದಿರುವೆ ಎಂದರು.
ಸೋಂಕಿನಿಂದ ಗುಣಮುಖನಾಗಿ ಮನೆಗೆ ವಾಪಸ್ ಬಂದಿರುವೆ. ನನಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಿದ ಇಲಾಖಾ ಮೇಲಧಿಕಾರಿಗಳು, ಪೊಲೀಸ್ ಸಹೋದ್ಯೋಗಿಗಳು, ಬಂಧು-ಮಿತ್ರರು ಕೊಟ್ಟೂರು ಜನತೆಗೆ ಧನ್ಯವಾದ ಎಂದು ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ಹೇಳಿದ್ದಾರೆ.