ಕಾರವಾರ (ಡಿ.25): ಸಮುದ್ರದಲ್ಲಿ ಮುಳುಗಡೆಯಾಗಿರುವ ಸುವರ್ಣ ತ್ರಿಭುಜ ಯಾಂತ್ರಿತ ಬೋಟ್‌ನ ಅವಶೇಷವನ್ನು ಮೇಲೆತ್ತಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮೀನುಗಾರಿಕೆ ಹಾಗೂ ಒಳನಾಡು ಮತ್ತು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. 

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇದರಿಂದ ಸಂತ್ರಸ್ತ ಕುಟುಂಬಕ್ಕೆ ಒಂದು ಸಮಾಧಾನ ಸಿಗಲಿದೆ. ಈಗಾಗಲೇ ಈ ಬೋಟ್ ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ಪರಿಹಾರಗಳನ್ನು ನೀಡಲಾಗಿದೆ. ಈ ಮೀನುಗಾರ ಕುಟುಂಬದ 28 ಲಕ್ಷ ರು. ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿಯವರು ವಿಶೇಷವಾಗಿ ಕಾಳಜಿ ತೋರಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಕುರಿತಂತೆ ಯಾವ ಸ್ಥಿತಿಗತಿ ಇದೆ ಎಂಬುದನ್ನು ವರದಿ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 12 ನಾಟಿಕಲ್ ಮೈಲು ದಾಟಿ ಕರ್ನಾಟಕ ಗಡಿಯಲ್ಲಿ ಮೀನುಗಾರಿಕೆಗೆ ಬರುವ ಗೋವಾ ಸೇರಿದಂತೆ ಇತರ ಮೀನುಗಾರರ ಚಟುವಟಿಕೆಯನ್ನು ನಿಯಂತ್ರಿಸಬೇಕು. ನಮ್ಮ ಮೀನುಗಾರರಿಗೆ ಲೈಟ್ ಫಿಷಿಂಗ್ ನಿರ್ಬಂಧಿಸಿ ನೆರೆ ಜಿಲ್ಲೆಯವರು ಲೈಟ್ ಫಿಷಿಂಗ್ ಮಾಡುವುದರಿಂದ ನಮ್ಮ ಮೀನುಗಾರರಿಗೆ ಅನ್ಯಾಯವಾಗಲಿದೆ. ಅಲ್ಲದೆ ಮೀನಿನ ಸಂತತಿ ನಾಶವಾಗಿ ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆ ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ ಮೀನುಗಾರಿಕಾ ಇಲಾಖೆಗೆ ಸೂಚಿಸಿದರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ. ನಾಗರಾಜ್, ಬಂದರು ಅಧಿಕಾರಿ ಕ್ಯಾಪ್ಟನ್ ಸಿ. ಸ್ವಾಮಿ, ಮುಜರಾಯಿ ಇಲಾಖೆ ಜಿಲ್ಲಾ ಅಧಿಕಾರಿ ಎಸ್. ಪುರುಷೋತ್ತಮ ಇದ್ದರು