Asianet Suvarna News Asianet Suvarna News

ಫೋಟೊ ಸ್ಟುಡಿಯೋದಿಂದ ರಾಜ್ಯದ ಮಂತ್ರಿ ಹುದ್ದೆವರೆಗೆ

ಕೋಟಾ ಶ್ರೀನಿವಾಸ ಪೂಜಾರಿ ಅವರ ಜರ್ನಿ ಜೀವನ ಆರಂಭವಾಗಿದ್ದು ಫೋಟೊ ಸ್ಟುಡಿಯೋದಿಂದ. ನಂತರ ರಾಜಕೀಯ ಬದುಕಲ್ಲಿ ಗ್ರಾ.ಪಂ.ನಿಂದ ವಿಧಾನ ಪರಿಷತ್ತಿನ ಮೊಗಸಾಲೆವರೆಗಿನ ಪ್ರತಿಯೊಂದು ಜನಪ್ರತಿನಿಧಿ ಸ್ಥಾನವನ್ನು ಮೆಟ್ಟಿಲನ್ನಾಗಿ ಹತ್ತಿ ಬಂದವರು.

Kota Srinivas Poojary Journey From Photo Studio to Vidhana Soudha
Author
Bengaluru, First Published Aug 21, 2019, 3:08 PM IST

ಉಡುಪಿ [ಆ.21] :  ಬಡತನ ಮತ್ತು ಹಿಂದುಳಿದ ಸಮುದಾಯದ ಸಂಘರ್ಷದಲ್ಲಿ ನಾಯಕನಾಗಿ ಬೆಳೆದು ಇದೀಗ ರಾಜ್ಯದ ಸಂಪುಟ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ (54) ಅವರು ಗ್ರಾ.ಪಂ.ನಿಂದ ವಿಧಾನ ಪರಿಷತ್ತಿನ ಮೊಗಸಾಲೆವರೆಗಿನ ಪ್ರತಿಯೊಂದು ಜನಪ್ರತಿನಿಧಿ ಸ್ಥಾನವನ್ನು ಮೆಟ್ಟಿಲನ್ನಾಗಿ ಹತ್ತಿ ಬಂದವರು.

ಕೋಟ ಪೇಟೆಯ ಮೂಲೆಯೊಂದರಲ್ಲಿ ಸ್ವಾತಿ ಎಂಬ ಫೋಟೋ ಸ್ಟುಡಿಯೋ ನಡೆಸುತ್ತಿದ್ದ ಶ್ರೀನಿವಾಸ ಪೂಜಾರಿ ಅವರಿಗೆ ಆರ್‌ಎಸ್‌ಎಸ್‌ನ ಸೆಳೆತವಿತ್ತು. 1993ರಲ್ಲಿ ಕೋಟತಟ್ಟು ಗ್ರಾ.ಪಂ.ನ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಅವರ ರಾಜಕೀಯ ಜೀವನ ಆರಂಭವಾಯಿತು. 1999ರಲ್ಲಿ ತಾಪಂ ಸದಸ್ಯರಾಗಿ, 2006ರಲ್ಲಿ ಜಿಪಂ ಸದಸ್ಯರಾಗಿ ಆಯ್ಕೆಯಾದರು.

ಹೆಗ್ಡೆ ವಿರುದ್ಧ ಆರಂಭದಲ್ಲೇ ಸೋಲು: 2004ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಜಯಪ್ರಕಾಶ್‌ ಹೆಗ್ಡೆ ಅವರ ಎದುರು ಬಿಜೆಪಿಯಿಂದ ಸ್ಪರ್ಧಿಸಿ ಸೋತರು. ನಡುವೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಕೆಲಸ ಮಾಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂತರ 2010ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಬ್ಲೆಸಿಯಸ್‌ ಡಿಸೋಜಾ ಅವರು ನಿಧನರಾದಾಗ ಆ ಸ್ಥಾನಕ್ಕೆ ಪಕ್ಷ ಕೋಟಾ ಅವರನ್ನು ಆಯ್ಕೆ ನಿಲ್ಲಿಸಿ ಗೆಲ್ಲಿಸಿತು. 2012ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಡಾ.ವಿ.ಎಸ್‌.ಆಚಾರ್ಯರು ಹಠಾತ್ತನೆ ನಿಧಾನರಾದಾಗ ಅವರ ಸಚಿವ ಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆರಿಸಲಾಯಿತು. ಮುಜರಾಯಿ ಸಚಿವರಾಗಿ ಕೋಟ ಉತ್ತಮ ಹೆಸರು ಗಳಿಸಿದ್ದರು.

2016ರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್‌ ರಾಜ್ಯ ಸದಸ್ಯರ ಪ್ರತಿನಿಧಿಯಾಗಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷರಾಗಿಯೂ ನೇಮಕವಾದರು. 2018ರಲ್ಲಿ ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕರೂ ಆಗಿದ್ದರು. ಇದೀಗ ಸಂಪುಟ ಸಚಿವ ಸ್ಥಾನವನ್ನು ಪಡೆದಿದ್ದಾರೆ.

7ನೇ ತರಗತಿ ತನಕ ಓದಿದಾತ ಈಗ ರಾಜ್ಯದ ಮಂತ್ರಿ 

7ನೇ ತರಗತಿಯವರೆಗೆ ಶಿಕ್ಷಣ ಪೂರೈಸಿರುವ ಕೋಟ, ಅವರು ಆರಂಭದ ದಿನಗಳಲ್ಲಿ ಕೋಟದಲ್ಲಿ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದರು. ಡಾ.ಕೋಟ ಶಿವರಾಮ ಕಾರಂತರ ದೊಡ್ಡ ಅಭಿಮಾನಿಯಾಗಿರುವ ಅವರ ವಿಫುಲವಾದ ಸಾಹಿತ್ಯದ ಓದು ಅವರ ಅಂಕಣ ಬರಹಗಳಲ್ಲಿ ವ್ಯಕ್ತವಾಗುತ್ತದೆ. ಪಂಚಾಯತ್‌ ರಾಜ್‌ ಅವರ ಆಸಕ್ತಿಯ ವಿಷಯ, ಇದರಲ್ಲಿ ಅವರು ವಿಧಾನಪರಿಷತ್‌ ಒಳಗೆ ಮತ್ತು ಹೊರಗೆ ಅವರೊಬ್ಬ ಒಳ್ಳೆಯ ಸಂಪನ್ಮೂಲ ವ್ಯಕ್ತಿಯೂ ಹೌದು.

ಅವರು ಕೋಟದಲ್ಲಿ ಪತ್ನಿ ಶಾಂತಾ, ಮಕ್ಕಳು ಸ್ವಾತಿ, ಶಶಿಧರ್‌ ಮತ್ತು ಶೃತಿ ಅವರೊಂದಿಗೆ 2.50 ಎಕರೆ ಭತ್ತದ ಗದ್ದೆಯಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದಾರೆ.

Follow Us:
Download App:
  • android
  • ios