Asianet Suvarna News Asianet Suvarna News

ನನ್ನ ಮನೆಯ ಬಗ್ಗೆ ತನಿಖೆ ಮಾಡಿ: ಲೋಕಾಯುಕ್ತಕ್ಕೆ ಕೋಟ ಮನವಿ

*  ಶ್ರೀನಿವಾಸ ಪೂಜಾರಿ ಅವರ ಮನೆಗೆ 6 ಕೋಟಿ ವೆಚ್ಚ
*  ಇಲ್ಲ 60 ಲಕ್ಷ ರು. ವೆಚ್ಚ - ಕೋಟ ಸ್ಪಷ್ಟನೆ
* ನನ್ನ ಆದಾಯಕ್ಕಿಂತ ಮನೆ ನಿರ್ಮಾಣದ ವೆಚ್ಚ ಹೆಚ್ಚಾಗಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು
 

Kota Shrinivas Poojari Request to Lokayukta for Investigate of My Construction House grg
Author
Bengaluru, First Published Jul 31, 2021, 7:46 AM IST

ಉಡುಪಿ(ಜು.31): ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 6 ಕೋಟಿ ರು. ವೆಚ್ಚದಲ್ಲಿ ಮನೆ ಕಟ್ಟಿಸುತಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಿಂದ ತೀವ್ರ ಬೇಸರಗೊಂಡಿರುವ ಕೋಟ ಅವರು ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಯ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಗಿಳಿಯಾರು ಗ್ರಾಮದಲ್ಲಿ ನಿರ್ಮಿಸುತ್ತಿರುವ 3 ಅಂತಸ್ತಿನ ಮನೆಯ ಚಿತ್ರದೊಂದಿಗೆ, ಸಜ್ಜನ, ಶುದ್ಧಹಸ್ತ ಪ್ರಾಮಾಣಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನಿರ್ಮಾಣ ಹಂತದಲ್ಲಿರುವ ಗುಡಿಸಲು, ವೆಚ್ಚ ಕೇವಲ 6 ಕೋಟಿ ರು.ಗಳು ಎಂಬ ವ್ಯಂಗ್ಯಭರಿತ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಮ್ಮ ಕೋಟದ ಈಗಿನ ಮನೆ ನ್ಯಾಯಾಲಯದ ವ್ಯಾಜ್ಯದಲ್ಲಿದೆ. ಆದ್ದರಿಂದ ತಾವು ಗಿಳಿಯಾರು ಗ್ರಾಮದಲ್ಲಿ ಖರೀದಿಸಿರುವ 13 ಸೆಂಟ್ಸ್‌ ಭೂಮಿಯಲ್ಲಿ 60 ಲಕ್ಷ ರು. ವೆಚ್ಚದಲ್ಲಿ ಮನೆ ಕಟ್ಟಿಸುತಿದ್ದೇನೆ. ಅದಕ್ಕಾಗಿ 2 ವರ್ಷಗಳ ಹಿಂದೆ ರಾಜ್ಯ ಅಪೆಕ್ಸ್‌ ಬ್ಯಾಂಕಿನಿಂದ 35 ಲಕ್ಷ ರು. ಸಾಲ ಪಡೆದಿದ್ದೇನೆ. ಅದನ್ನು ಮಂತ್ರಿಯಾಗಿ ನನ್ನ ಗೌರವಧನ - ವೇತನದಿಂದ ಪಾವತಿಸುತಿದ್ದೇನೆ. ಇನ್ನೂ 40 ಲಕ್ಷ ರು. ಸಾಲಕ್ಕಾಗಿ ಎಸ್‌.ಬಿ.ಐ.ಗೆ ಅರ್ಜಿ ಸಲ್ಲಿಸಿದ್ದೇನೆ. ತನ್ನ ಮತ್ತು ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವ ಮಗ ಶಶಿಧರ್‌ನ ಆದಾಯದ ಲೆಕ್ಕಾಚಾರದಲ್ಲಿ ಈ ಮನೆ ಕಟ್ಟಿಸುತಿದ್ದೇನೆ. ಆದರೆ ಈ ಮನೆಯನ್ನು 6 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುತಿದ್ದೇನೆ ಎಂದು ಆರೋಪ ಮಾಡಿರುವುದು ತನಗೆ ನೋವುಂಟು ಮಾಡಿದೆ ಎಂದಿದ್ದಾರೆ.

ಆಯ್ದ 100 ದೇಗುಲಗಳಲ್ಲಿ ಸಪ್ತಪದಿ ಯೋಜನೆ ಶೀಘ್ರ ಪುನಾರಂಭ

ನಾನು ಶಾಸಕ ಮತ್ತು 2 ಬಾರಿ ಮಂತ್ರಿ, 1 ಬಾರಿ ವಿರೋಧ ಪಕ್ಷ ನಾಯಕನಾಗಿ ನನ್ನ ಗೌರವಧನ, ವೇತನ, ಸರ್ಕಾರದ ಇತರ ಆರ್ಥಿಕ ಸೌಲಭ್ಯಗಳನ್ನು ತನಿಖೆ ಮಾಡಬೇಕು, ನಾನು ಶಾಸಕನಾದ ಮೇಲೆ ನಿಯಮ 7ರಡಿ ನನ್ನ ಆಸ್ತಿಪಾಸ್ತಿ - ಉತ್ತರದಾಯಿತ್ವ ವಿವರಗಳನ್ನು ಪ್ರತಿವರ್ಷ ಲೋಕಾಯುಕ್ತಕ್ಕೆ ಸಲ್ಲಿಸಿದ್ದೇನೆ. ನನ್ನ ಆದಾಯಕ್ಕಿಂತ ಮನೆ ನಿರ್ಮಾಣದ ವೆಚ್ಚ ಹೆಚ್ಚಾಗಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗಿಲ್ಲದಿದ್ದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಲೋಕಾಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ.

ಪ್ರಚಲಿತ ಸಂಪುಟ ವಿಸ್ತರಣೆಯೂ ಸೇರಿದಂತೆ, ನಡೆಯುತ್ತಿರುವ ಮಹತ್ತರ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಒಂದಷ್ಟುಜನ ನನ್ನ ಸಾರ್ವಜನಿಕ ಜೀವನವನ್ನು ವಿರೋಧಿಸುವವರು ತನ್ನ ಮೇಲೆ ಈ ಆರೋಪ ಹೊರಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ನೀತಿ, ನಿಯಮಗಳನ್ನು ಗೌರವಿಸುವ ನಾನು ಈ ಆಪಪ್ರಚಾರಗಳಿಗೆ ವಿದಾಯ ಹೇಳಲು ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.  

60 ಲಕ್ಷ ರು. ಕೊಟ್ಟರೆ ಮನೆ ನಿಮ್ಮದು

ಈ ನಡುವೆ ಈ ಮನೆಯ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಐರೋಡಿ ವಿಠಲ ಪೂಜಾರಿ ಅವರು, ಕೋಟ ಶ್ರೀನಿವಾಸ ಪೂಜಾರಿ ಅವರು ಕಟ್ಟುತ್ತಿರುವ ಮನೆಗೆ 6 ಕೋಟಿ ರು. ಮೌಲ್ಯ ಎಂದು ವ್ಯಂಗ್ಯ ಮಾಡಿ, ಖುಷಿ ಪಡುತ್ತಿರುವವರು 60 ಲಕ್ಷ ರು. ಕೊಟ್ಟರೆ ಮನೆಯನ್ನು ಅವರಿಗೆ ನೀಡುತ್ತೇನೆ ಅಥವಾ 6 ಕೋಟಿ ರು. ಕೊಟ್ಟರೆ ಇಂತಹದ್ದದೇ 10 ಮನೆಗಳನ್ನು ಕಟ್ಟಿ ಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
 

Follow Us:
Download App:
  • android
  • ios