ಶ್ರೀಕಾಂತ ಅಕ್ಕಿ, ಕನ್ನಡಪ್ರಭ

ಕೊಪ್ಪಳ[ಮೇ.27]: ತಾಯಿ ತನ್ನ ಮಕ್ಕಳನ್ನು ಪೋಷಿಸುವುದು ಸ್ವಾಭಾವಿಕ. ಆದರೆ ಜಗತ್ತಿನ ಪರಿವಿಯೇ ಇಲ್ಲದ 3 ವರ್ಷದ ಮಗುವೊಂದು ಭಿಕ್ಷೆ ಬೇಡಿ, ಕಂಡವರ ಬಳಿ ಆಹಾರ ಬೇಡಿ ಪಡೆದು ಆ ತಾಯಿಯನ್ನು ಜೋಪಾನ ಮಾಡುತ್ತಿದೆ!

ನಗರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ 4 ದಿನದಿಂದ ಈ ದೃಶ್ಯ ಅಲ್ಲಿದ್ದವರ ಮನಕಲಕುವಂತೆ ಮಾಡುತ್ತಿದೆ. ಕಾರಟಗಿ ಬಳಿಯ ಸಿದ್ದಾಪುರ ಗ್ರಾಮದ ದುರ್ಗಮ್ಮ ಬೋವಿ ಎಂಬ ಮಹಿಳೆ ತನ್ನ 3 ವರ್ಷದ ಮಗಳು ಭಾಗ್ಯಶ್ರೀಯೊಂದಿಗೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾಳೆ. ಆದರೆ, ಈ ಮಹಿಳೆಯ ದಿನನಿತ್ಯ ಮದ್ಯ ಸೇವಿಸುವ ಖಯಾಲಿ ಇರುವುದರಿಂದ ವೈದ್ಯರು ಪ್ರಾರಂಭದಲ್ಲಿ ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ.

ಆದರೆ, ಡಿಸ್ಚರ್ಜ್ ಆದ ಬಳಿಕ ಮಹಿಳೆ ತನ್ನ ಮಗುವನ್ನು ಕರೆದುಕೊಂಡು ಎಲ್ಲಿಯೂ ಹೋಗಿಲ್ಲ. ಈಗ ತೀರ ನಿಶಕ್ತಳಾಗಿ ಜಿಲ್ಲಾಸ್ಪತ್ರೆಯಲ್ಲೇ ಉಳಿದುಕೊಂಡಿದ್ದಾಳೆ. ತೀವ್ರ ನಿಶಕ್ತಳಾಗಿರುವುದರಿಂದ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಕೂಡ ಮಹಿಳೆಯನ್ನು ಆಸ್ಪತ್ರೆಯಿಂದ ಹೊರಸಾಗಿಸುವ ಪ್ರಯತ್ನ ಮಾಡಿಲ್ಲ. ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿರುವ ತನ್ನ ತಾಯಿಗೆ ಭಿಕ್ಷೆ ಬೇಡಿ ದಿನನಿತ್ಯ ಊಟ ಮಾಡಿಸುವ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ.