Asianet Suvarna News Asianet Suvarna News

ಪುತ್ರನ ನೋಡಲು ಬಂದ ತಂದೆಗೆ ಸಿಕ್ಕಿದ್ದು ಸಾವಿನ ಸುದ್ದಿ!

ಪುತ್ರನ ನೋಡಲು ಬಂದ ತಂದೆಗೆ ಸಿಕ್ಕಿದ್ದು ಸಾವಿನ ಸುದ್ದಿ!| ಬೆಂಗಳೂರಿನಿಂದ ಬಂದು ಹಾಸ್ಟೆಲ್‌ ಕಡೆಗೆ ಹೊರಟಾಗಿದ್ದಾಗಲೇ ‘ಮಗ ಇನ್ನಿಲ್ಲ’ ಸುದ್ದಿ ಕೇಳಿ ಬಿಕ್ಕಿಬಿಕ್ಕಿ ಅತ್ತ ತಂದೆ| ಸೋದರಿಯ ಮಗನನ್ನೇ ತನ್ನ ಮಗನೆಂದು ಸಾಕಿದ್ದ ತಾಯಿಗೆ ಆಘಾತ| ಕೊಪ್ಪಳ ದುರಂತದಲ್ಲಿ ಮನಕಲಕುವ ಕತೆಗಳು

Koppal Father Who Came To see His Son To Hostel Receives His Death News
Author
Bangalore, First Published Aug 19, 2019, 8:03 AM IST
  • Facebook
  • Twitter
  • Whatsapp

ಸೋಮರಡ್ಡಿ ಅಳವಂಡಿ

ಕೊಪ್ಪಳ[ಆ.19]: ‘ಅಯ್ಯೋ ದುರ್ವಿಧಿಯೇ, ಎಂತಹ ಕ್ರೂರಿ ನೀನು. ನನ್ನ ಪತಿಯನ್ನು ಕಿತ್ತುಕೊಂಡೆ, ಅಕ್ಕನ ಮಗನನ್ನೇ ನನ್ನ ಮಗನಂತೆ ಬೆಳೆಸುತ್ತಿದ್ದೆ. ಈಗ ಅವನನ್ನೂ ಕಿತ್ತುಕೊಂಡೆಯಲ್ಲಾ... ದೇವರು ಇದ್ದಾನೆ ಎನ್ನುವುದೆಲ್ಲವೂ ಬರಿ ಸುಳ್ಳು, ದೇವರು ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ....’

ಕೊಪ್ಪಳ ನಗರದ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನಲ್ಲಿ ನಡೆದ ವಿದ್ಯುತ್‌ ಅವಘಡದಿಂದ ಮೃತಪಟ್ಟಿರುವ ಐವರು ವಿದ್ಯಾರ್ಥಿಗಳ ಪಾಲಕರು ಘಟನಾ ಸ್ಥಳಕ್ಕೆ ಆಸ್ಪತ್ರೆಗೆ ಆಗಮಿಸಿ ಈ ಪರಿಯಾಗಿ ಹೀಗೆ ಗೋಳಾಡುತ್ತಿದ್ದರು. ಎದೆ ಎದೆ ಬಡಿದುಕೊಂಡು ರೋದಿಸುತ್ತಿದ್ದರೆ ಅಲ್ಲಿ ಸೇರಿದ್ದ ಜನರ ಕಣ್ಣಾಲಿಗಳು ತೇವಗೊಂಡಿದ್ದವು. ಎಲ್ಲರ ಮುಖದಲ್ಲಿ ದುಃಖ, ಆಕ್ರೋಶ ಮಡುಗಟ್ಟಿತ್ತು. ಏನೂ ಅರಿಯದ, ಆಡಿ, ಬಾಳಿ ಬೆಳಗಬೇಕಾದ ಅಮಾಯಕ ವಿದ್ಯಾರ್ಥಿಗಳನ್ನು ಈ ರೀತಿ ಬಲಿ ಪಡೆದ ವ್ಯವಸ್ಥೆಯನ್ನು ಟೀಕಿಸುತ್ತಿದ್ದರು.

ಒಂದೊಂದು ವಿದ್ಯಾರ್ಥಿಯ ಸಾವು ಒಂದೊಂದು ಕರುಣಾಜನಕ ಕತೆ ಹೇಳುತ್ತದೆ. ಬೆಂಗಳೂರಿನಲ್ಲಿ ಕೂಲಿ ಮಾಡಿ ದುಡಿಯುತ್ತಿದ್ದ ವಿದ್ಯಾರ್ಥಿಯ ಪಾಲಕರೊಬ್ಬರು ಮಗನ ಯೋಗಕ್ಷೇಮ ವಿಚಾರಿಸಲು ಶನಿವಾರವಷ್ಟೇ ಕೊಪ್ಪಳಕ್ಕೆ ಬಂದಿದ್ದರು. ಭಾನುವಾರ ಮುಂಜಾನೆ ಹಾಸ್ಟೆಲ್‌ಗೆ ಬರುವ ಹೊತ್ತಿಗೆ ದುರಂತ ನಡೆದು ಹೋಗಿತ್ತು. ಹಾಸ್ಟೆಲ್‌ಗಳಲ್ಲಿದ್ದವರೆಲ್ಲ ಬಡ ಕುಟುಂಬಗಳಿಂದ ಬಂದವರು. ಓದಿನಲ್ಲಿ ಮುಂದಿದ್ದ ಎಲ್ಲರೂ ತರಗತಿಯಲ್ಲಿ ಉತ್ತಮ ಅಂಕ ಸಹ ಪಡೆದಿದ್ದರು.

ತಾಯಂದಿರ ರೋದನ:

ಲಾಚನಕೇರಿ ಗ್ರಾಮದ ನಾಗಪ್ಪ ಮತ್ತು ನಿಂಗಪ್ಪ ಕುರಿ ಸಹೋದರರು, ಬಸವ್ವ ಹಾಗೂ ಲಲಿತಾ ಎನ್ನುವ ಸಹೋದರಿಯರನ್ನೇ ಮದುವೆಯಾಗಿದ್ದರು. ಬಸವ್ವನಿಗೆ ಇಬ್ಬರು ಮಕ್ಕಳು. ಓರ್ವ ಗಂಡು, ಮತ್ತೊಂದು ಹೆಣ್ಣು. ನಿಂಗಪ್ಪ ಮತ್ತು ಲಲಿತಾ ದಂಪತಿಗೆ ಮಕ್ಕಳಿರಲಿಲ್ಲ. ಈ ನಡುವೆ ನಿಂಗಪ್ಪನೂ ಇತ್ತೀಚೆಗೆ ತೀರಿಕೊಂಡಿದ್ದ. ಹೀಗಾಗಿ, ಬಸವ್ವನ ಇಬ್ಬರು ಮಕ್ಕಳನ್ನೂ ಸಹೋದರಿಯರು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಗಣೇಶ ತೀರಿಕೊಂಡಿದ್ದರಿಂದ ಇಬ್ಬರು ಸಹೋದರಿಯರಿಗೆ ಇದ್ದ ಒಂದು ಗಂಡು ಮಗುವೂ ಇಲ್ಲದಂತೆ ಆಗಿದೆ. ಹೀಗಾಗಿ ತಾಯಂದಿರು ಬೋರಾಡಿ ಅಳುತ್ತಿರುವ ದೃಶ್ಯ ಮನಕಲಕುವಂತೆ ಇತ್ತು.

ಬೆಳ್ಳಂ ಬೆಳಗ್ಗೆ ಜವರಾಯನ ಅಟ್ಟಹಾಸ: ವಿದ್ಯುತ್ ಶಾಕ್ ತಗುಲಿ 5 ವಿದ್ಯಾರ್ಥಿಗಳು ಸಾವು!

ಕೊನೆಗೂ ಮಗನನ್ನು ನೋಡಲೇ ಇಲ್ಲ:

ಮೆತಗಲ್‌ ಗ್ರಾಮದ ಮಲ್ಲಿಕಾರ್ಜುನ್‌ ತಂದೆ-ತಾಯಂದಿರು ಬೆಂಗಳೂರಿಗೆ ದುಡಿಯಲು ಹೋಗಿದ್ದಾರೆ. ಮಗನನ್ನು ನೋಡುವಾಸೆಯಿಂದ ತಂದೆ ಅಮರೇಶ ಶನಿವಾರಷ್ಟೇ ಬಂದಿದ್ದರು. ಹಿಟ್ನಾಳ ಗ್ರಾಮದ ತಂಗಿಯ ಮನೆಯಲ್ಲಿ ತಂಗಿದ್ದ ಅಮರೇಶ ಭಾನುವಾರ ಬೆಳಗ್ಗೆ ಮಗನನ್ನು ನೋಡಲು ಹಾಸ್ಟೆಲ್‌ಗೆ ಬರುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿಯೇ ದುರ್ಘಟನೆ ವಿಷಯ ಗೊತ್ತಾಗಿದೆ. ಇದರಿಂದ ಜರ್ಜರಿತನಾದ ಅಮರೇಶ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ಈ ದೃಶ್ಯ ಎಂಥವರ ಕರುಳು ಚುರ್‌ ಎನ್ನುವಂತೆ ಇತ್ತು.

ಚೆನ್ನಾಗಿ ಓದುತ್ತಿದ್ದವನೂ ಹೋಗಿಬಿಟ್ಟ...:

ಮೃತಪಟ್ಟಮತ್ತೊಬ್ಬ ಕುಮಾರ ನಾಯಕ್‌ ಕೊಪ್ಪಳ ನಗರದ ಕಾಳಿದಾಸ ಪ್ರೌಢ ಶಾಲೆಯಲ್ಲಿ 9ನೇ ತರಗತಿಗೆ ಓದುತ್ತಿದ್ದ. ಓದಿನಲ್ಲಿ ಈತ ಕ್ಲಾಸಿಗೆ ಫಸ್ಟ್‌ ಎನ್ನುವುದು ಅವರ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್‌.ಎಸ್‌.ಗುರುವಿನ ಅವರ ಮಾತು. ಸದಾ ಓದುವುದಕ್ಕಾಗಿ ತುಡಿಯುತ್ತಿದ್ದ ಕುಮಾರ ನಿಜಕ್ಕೂ ಬದುಕಿನಲ್ಲಿ ಏನಾದರೂ ಸಾಧಿಸುತ್ತಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. ದುರಂತ ಎಂದರೆ ಈತ ಮುಂಡರಗಿ ತಾಲೂಕಿನ ಬೀಡನಾಳ ತಾಂಡಾದನಾಗಿದ್ದರೂ ಹೈದರ್‌ ನಗರದ ಅಜ್ಜಿಯ ಮನೆಯಲ್ಲಿ ಇದ್ದುಕೊಂಡೇ ಓದಿದ್ದಾನೆ. ಈಗ ಹಾಸ್ಟೆಲ್‌ನಲ್ಲಿ ಇರುತ್ತಿದ್ದ. ಲಚ್ಚಪ್ಪ ಲಮಾಣಿಗೆ ಐವರು ಮಕ್ಕಳಿದ್ದರೂ ಗಂಡು ಮಗು ಈತನೊಬ್ಬನೇ. ದೇವರಾಜ ನಾಗಪ್ಪ ಹಡಪದ 9ನೇ ತರಗತಿ. ಈತನ ಸ್ವಂತ ಗ್ರಾಮ ಮಾದಿನೂರು ಆಗಿದ್ದರೂ ತಾಯಿಯ ತವರು ಮನೆ ಇರುವ ಹಲಿಗೇರಿಯಲ್ಲಿ ಇದ್ದ. ನಿತ್ಯವೂ ಹಲಿಗೇರಿಯಿಂದಲೇ ಓಡಾಡುತ್ತಿದ್ದ. ಈ ವರ್ಷ ಈತನಿಗೆ ಹಾಸ್ಟೆಲ್‌ನಲ್ಲಿ ಸೀಟು ಸಿಕ್ಕಿದ್ದರಿಂದ ಹಾಸ್ಟೆಲ್‌ನಲ್ಲಿ ಇದ್ದ. ನಾಗಪ್ಪ ಹಡಪದ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಅದರಲ್ಲಿ ದೇವರಾಜ ಸಹ ಒಬ್ಬನು.

ಮುಗಿಲು ಮುಟ್ಟಿದ ಆಕ್ರಂದನ:

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತ ವಿದ್ಯಾರ್ಥಿಗಳ ಶವಪರೀಕ್ಷೆ ಮಾಡಲು ತಂದಿದ್ದರಿಂದ ಪಾಲಕರೆಲ್ಲರೂ ಅಲ್ಲಿಗೆ ಆಗಮಿಸಿದ್ದರು. ಪಾಲಕರ ಆಕ್ರಂದನ ಅಕ್ಷರಶಃ ಮುಗಿಲು ಮುಟ್ಟಿತ್ತು. ಇಂಥ ದುಸ್ಥಿತಿ ಯಾರಿಗೂ ಬರಬಾರದು ಎಂದು ಬೋರಾಡಿ ಅಳುತ್ತಿದ್ದರು. ಬದುಕಿ ಬೆಳಕಾಗಬೇಕಾದ ಮಕ್ಕಳು ಆಡುಆಡುತ್ತಲೇ ದೇವರು ಕಿತ್ತುಕೊಂಡಿದ್ದಾನೆ. ದೇವರಿಗೆ ಏನು ಸಿಟ್ಟು ಬಂದಿತ್ತೋ ಎಂದು ಬಿದ್ದು, ಬಿದ್ದು ಅಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಪಾಲಕರ ಕಣ್ಣೀರ ಕಟ್ಟೆಒಡೆದು ಹೋಗಿತ್ತು.

Follow Us:
Download App:
  • android
  • ios