ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯವರು ದಸರಾ ಉದ್ಘಾಟನೆಯನ್ನು ತಿರಸ್ಕರಿಸಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿದ 'ಜನತಾ ಟಿವಿ ಡಿಜಿಟಲ್' ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಶ್ರೀಗಳು ದಸರಾ ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳ (ಸೆ.27): ರಾಜ್ಯದ ಪ್ರಸಿದ್ಧ ತ್ರಿವಿಧ ದಾಸೋಹ ಮಂದಿರವಾದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ದಸರಾ ಉದ್ಘಾಟನೆಯನ್ನು ತಿರಸ್ಕರಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದ 'ಜನತಾ ಟಿವಿ ಡಿಜಿಟಲ್' ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಕೊಪ್ಪಳದ ಪ್ರಸಿದ್ಧ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳ ಕುರಿತು ನಿನ್ನೆ 'ಜನತಾ ಟಿವಿ ಡಿಜಿಟಲ್ 2' ಹೆಸರಿನ ಅಪ್ಲಿಕೇಶನ್‌ನಲ್ಲಿ ಶ್ರೀಗಳು ದಸರಾ ಉದ್ಘಾಟನೆ ಮಾಡಲು ನಿರಾಕರಿಸಿದ್ದಾರೆ ಎಂದು ಆಧಾರರಹಿತ ಮತ್ತು ಸುಳ್ಳು ಪೋಸ್ಟ್ ಒಂದನ್ನು ವೈರಲ್ ಮಾಡಲಾಗಿತ್ತು. ಈ ಸುಳ್ಳು ಸುದ್ದಿಯು ಸಾರ್ವಜನಿಕರಲ್ಲಿ ಮತ್ತು ಭಕ್ತರಲ್ಲಿ ತೀವ್ರ ಗೊಂದಲ ಮೂಡಿಸಿತ್ತು. ಈ ಗಂಭೀರ ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಂಡ ಕೊಪ್ಪಳ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್ ಡಿ. ಅವರು ಸ್ವಯಂಪ್ರೇರಿತವಾಗಿ (ಸುಮೋಟೋ) ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಶ್ರೀಗಳು ಒಪ್ಪಿಗೆ ನೀಡಿದ ನಂತರವೇ ಸಿಎಂ ಘೋಷಣೆ:
ಈ ಸುಳ್ಳು ಸುದ್ದಿ ಹರಿದಾಡುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್, 'ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟಿಸಲು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಪೂಜ್ಯರು ಒಪ್ಪಿಗೆ ನೀಡಿದ ಬಳಿಕವೇ ಮುಖ್ಯಮಂತ್ರಿಯವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, 'ಬೇರೆ ವಿಷಯಗಳಲ್ಲಿ ರಾಜಕೀಯ ಮಾಡಿ, ಆದರೆ ಪೂಜ್ಯರ ವಿಚಾರದಲ್ಲಿ ಯಾರೂ ಸುಳ್ಳು ಸುದ್ದಿ ಹರಡಬೇಡಿ. ನಾಳೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತವಾಗಿ ಆಹ್ವಾನ ನೀಡಲಿದ್ದಾರೆ. ನಾವೆಲ್ಲರೂ ಜತೆಯಾಗಿ ಹೋಗಿ ಆಹ್ವಾನ ನೀಡುತ್ತೇವೆ. ಗವಿಸಿದ್ದೇಶ್ವರ ಸ್ವಾಮೀಜಿಗಳು ದಸರಾ ಉದ್ಘಾಟನೆ ಮಾಡುತ್ತಿರುವುದು ಈ ಭಾಗದ ಜನರಿಗೆ ಹೆಮ್ಮೆಯ ವಿಚಾರ ಮತ್ತು ಇದು ಇತಿಹಾಸದ ಪುಟ ಸೇರುತ್ತದೆ. ಕಿಡಿಗೇಡಿಗಳು ಎಲ್ಲ ಕಡೆಯೂ ಇರುತ್ತಾರೆ, ಆದರೆ ಪೂಜ್ಯರ ವಿಷಯದಲ್ಲಿ ಇಂತಹ ಕೃತ್ಯ ಎಸಗಬಾರದು' ಎಂದು ಮನವಿ ಮಾಡಿದರು.


