ಕೊಪ್ಪಳ(ಮೇ.09): ಬಾಗಲಕೋಟೆ ಜಿಲ್ಲೆಯ ಡಾಣಕ್‌ಶಿರೂರ್‌ ಗ್ರಾಮದ ಕೋವಿಡ್‌-19 ಪ್ರಕರಣದ ನಂಟು ಕೊಪ್ಪಳ ಜಿಲ್ಲೆಗೆ ತಟ್ಟಿದ್ದು, ಟೆನ್ಶನ್‌ ಪ್ರಾರಂಭವಾಗಿದೆ. ಸೋಂಕಿತ (ಪಿ-681) ವ್ಯಕ್ತಿಯ ಜೊತೆಗೆ ನೇರ ಸಂಪರ್ಕ ಇರುವವರೇ ಕೊಪ್ಪಳ ಜಿಲ್ಲೆಯ ಮೂರು ಗ್ರಾಮಗಳಿಗೆ ಬಂದಿದ್ದರಿಂದ ಆತಂಕ ಸಹಜವಾಗಿದೆ.

"

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಷ್ಟಗಿ ತಾಲೂಕಿನ ಹನುಮನಾಳ, ನಿಲೋಗಲ್‌ ಹಾಗೂ ಯಲಬುರ್ಗಾ ತಾಲೂಕಿನ ತುಮರಿಗುದ್ದಿ ಗ್ರಾಮದ ಸುಮಾರು 44 ಜನರ ಸ್ಯಾಂಪಲ್‌ ಕಳುಹಿಸಿಕೊಡಲಾಗಿದೆ. ಇದುವರೆಗೂ ವರದಿ ಬಂದಿಲ್ಲ.
ಸೋಂಕಿತನ ದ್ವಿತೀಯ ಸಂಪರ್ಕ ಹೊಂದಿರುವ ವ್ಯಕ್ತಿ ಹನುಮನಾಳ ಗ್ರಾಮಕ್ಕೆ ಬಂದಿದ್ದು ಲಾಕ್‌ಡೌನ್‌ಗಿಂತ ಮೊದಲು ಎನ್ನಲಾಗಿದೆ. ಹೀಗಾಗಿ, ಅದು ಸಮಸ್ಯೆಯಾಗದು ಎನ್ನಲಾಗಿದೆ. ಈ ವ್ಯಕ್ತಿಯ ದೂರವಾಣಿ ಸಂಪರ್ಕದ ವಿವರ ನೋಡಿದಾಗ ಹನುಮನಾಳ ಗ್ರಾಮಕ್ಕೆ ಬಂದಿರುವುದರಿಂದ ಮುಂಜಾಗ್ರತೆಯಿಂದ ಚೆಕ್‌ ಮಾಡಲಾಗಿದೆ.

ಪೊಲೀಸ್‌ ಅಧಿಕಾರಿಗಳ ಮುಸುಕಿನ ಗುದ್ದಾಟ: ಜನರಿಗೆ ಹಿಡಿ ಮರಳೂ ಸಿಗ್ತಿಲ್ಲ!

ಈ ವ್ಯಕ್ತಿಯ ಸಂಪರ್ಕಿತರು ತುಮರಗುದ್ದಿ ಮತ್ತು ನಿಲೋಗಲ್‌ ಗ್ರಾಮಕ್ಕೆ ಮದುವೆ ಮತ್ತು ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದು ಲಾಕ್‌ಡೌನ್‌ ಆದ ಮೇಲೆಯೇ. ಇಲ್ಲಿಗೆ ಬರುವ ಮೊದಲೇ ಇವರಿಗೆ ಸೋಂಕಿತನ ಜೊತೆ ಸಂಪರ್ಕವಿತ್ತೆ, ಅಥವಾ ಬಳಿಕ ಸೋಂಕು ಬಂದಿತೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಯಾಕೆಂದರೆ ಸೋಂಕು ಇದೀಗ ಪತ್ತೆಯಾಗಿದ್ದರೂ, ಈ ಹಿಂದೆಯೇ ಅದು ಬಂದಿರುವುದನ್ನು ತಳ್ಳಿ ಹಾಕುವಂತಿಲ್ಲ.

ಕೊಪ್ಪಳ ಜಿಲ್ಲಾಡಳಿತ ಸೆಕೆಂಡರಿ ಕಾಂಟ್ಯಾಕ್ಟ್ ಬಂದವರೆಲ್ಲರ ಸ್ಯಾಂಪಲ್‌ನ್ನು ಬೆಂಗ​ಳೂ​ರಿಗೆ ಕಳುಹಿಸಿಕೊಟ್ಟಿದೆ. ಬಳ್ಳಾರಿಯಲ್ಲಿ ಲ್ಯಾಬ್‌ ಸಮಸ್ಯೆಯಾಗಿರುವುದರಿಂದ ಈ ಸ್ಯಾಂಪಲ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಹೀಗಾಗಿ, ವರದಿ ಬರುವುದು ತಡವಾಗುತ್ತದೆ ಎನ್ನಲಾಗಿದೆ. ಈ ಮೂರು ಗ್ರಾಮಗಳಲ್ಲಿ ಟೆನ್ಶನ್‌ ಟೆನ್ಶನ್‌ ಎನ್ನುವಂತಹ ಪರಿಸ್ಥಿತಿ ಇದೆ.

ಕ್ಷೌರದ ಅಂಗಡಿ ಪ್ರಾರಂಭ

ಜಿಲ್ಲೆ ಹಸಿರು ವಲಯದಲ್ಲಿ ಇರುವುದರಿಂದ ಕ್ಷೌರದ ಅಂಗಡಿಗಳನ್ನು ಪ್ರಾರಂಭಿಸಲು ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಕ್ಷೌರಿಕರ ಅಂಗಡಿಗಳು ಮೇ 9ರಂದು ಪ್ರಾರಂಭವಾಗುತ್ತವೆ.

ಸ್ಥಳೀಯ ಸಂಸ್ಥೆಯಿಂದ ವ್ಯಾಪಾರ ಪರವಾನಗಿ, ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರ ತೆರೆದಿರಬೇಕು. ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರಬೇಕು. ಸರದಿಯಲ್ಲಿಯೇ ಬರಬೇಕು. ಕೆಮ್ಮು, ಧಮ್ಮು ಇದ್ದವರು ಬಂದರೆ ಮಾಹಿತಿ ನೀಡಬೇಕು. ​ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ.

ಬಾಗಲಕೋಟೆಯ ಪಾಸಿಟಿವ್‌ ಪ್ರಕರಣದಲ್ಲಿ ಸಂಬಂಧಿಸಿದಂತೆ ಈಗಾಗಲೇ ಸ್ಯಾಂಪಲ್‌ಗಳನ್ನು ಕಳುಹಿಸಿಕೊಡಲಾಗಿದ್ದು, ಅವುಗಳ ವರದಿಗಳನ್ನು ಕಾಯಲಾಗುತ್ತಿದೆ. ಆದರೆ, ಹನುಮನಾಳ ಗ್ರಾಮಕ್ಕೆ ಲಾಕ್‌ಡೌನ್‌ ಮೊದಲೇ ಬಂದು ಹೋಗಿರುವುದರಿಂದ ಸಮಸ್ಯೆ ಇಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಹೇಳಿದ್ದಾರೆ.