ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.09): ಜಿಲ್ಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಜನಪ್ರತಿನಿಧಿಗಳಿಗೂ ದೊಡ್ಡ ತಲೆನೋವಾಗಿದೆ. ಸರ್ಕಾರ ಸೇರಿದಂತೆ ಖಾಸಗಿಯಾಗಿಯೂ ಕಟ್ಟಡ ಕಾಮಗಾರಿಗೆ ಹಿಡಿ ಮರಳು ಸಿಗದಂತಾಗಿದೆ.

ಎಸ್ಪಿ ಜಿ. ಸಂಗೀತ ಹಾಗೂ ಡಿವೈಎಸ್ಪಿ ವೆಂಕಟಪ್ಪ ನಾಯಕ್‌ ಅವರ ನಡುವೆ ಕಳೆದ ಆರು ತಿಂಗ​ಳಿಂದ ಶೀತಲ ಸಮರ ನಡೆಯುತ್ತಿದ್ದು, ಇದಕ್ಕೆ ಕಾರಣವೇನು ಎಂದು ಸಾಮಾನ್ಯರಿಗೂ ಗೊತ್ತಿದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ ಸಹ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಸ್ಥಳೀಯ ಜನಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಗಿದೆ.

17 ತಿಂಗಳಿಂದ ಸಿಗದ ವೇತನ: ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ದಿನಗೂಲಿ ನೌಕರ

ಮರಳು ಮಾರಾಟಕ್ಕೆ ನಾನಾ ಅವಕಾಶ ಇದೆ. ಪಾಸ್‌ ಮೂಲಕ, ಸರ್ಕಾರದ ರಾಜಸ್ವವನ್ನು ತುಂಬಿ ಮಾರಾಟ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರವೂ ಈ ಕುರಿತು ಹೊಸ ಮರಳು ನೀತಿ ಜಾರಿಗೆ ತಂದಿದ್ದರೂ ಅದನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ಉತ್ಸುಕತೆ ತೋರಿಸುತ್ತಿಲ್ಲ. ಹೀಗಾಗಿ, ಮರಳು ಅಭಾವ ಸೃಷ್ಟಿಯಾಗಿದೆ. ನಾಲ್ಕಾರು ಪಟ್ಟು ದರ ನೀಡಿದರೂ ಹಿಡಿ ಮರಳು ಸಿಗದಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯಪ್ರವೇಶಕ್ಕೆ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿರುವುದರಿಂದ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ.

ಮನೆಯ ಮುಂದಿನ ಮರಳು ತೆರವು:

ಮನೆ ಅಥವಾ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಹಾಕಿಕೊಂಡಿದ್ದ ಮರಳನ್ನು ಸಹ ಪೊಲೀಸರೇ ಮುಂದೆ ನಿಂತು ವಾಪಸ್‌ ತೆಗೆದುಕೊಂಡು ಹೋಗುತ್ತಿದ್ದಾರೆ. ಹಳ್ಳಿ ಹಳ್ಳಿಯನ್ನು ಸುತ್ತಿ ಪೊಲೀಸರು ಮರಳು ಮಾರಾಟಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಇದರಿಂದ ಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತೆ ಆಗಿದೆ.

ಬಿಜೆಪಿ ಸರ್ಕಾರ ಬಂದ ಮೇಲೆ:

ಕಾಂಗ್ರೆಸ್‌ ನೇತೃತ್ವ ಸರ್ಕಾರ ಹಾಗೂ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಸರ್ಕಾರ ಇದ್ದಾಗ ಮರಳು ಸರಾಗವಾಗಿ ದೊರೆಯುತ್ತಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಬಂದ ಮೇಲೆಯೇ ಮರಳಿನ ಸಮಸ್ಯೆ ಅತಿಯಾಗಿದೆ ಎನ್ನುವುದು ಸಾಮಾನ್ಯರ ಆರೋಪವಾಗಿದೆ. ಎಸ್ಪಿ ಹಾಗೂ ಡಿವೈಎಸ್ಪಿ ಅವರ ನಡುವಿನ ಕಿತ್ತಾಟ ಬಿಜೆಪಿ ಸರ್ಕಾರಕ್ಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮಸಿ ಬಳಿಯುವಂತಾಗಿದೆ. ಮೇಲ್ನೋಟಕ್ಕೆ ಇದು ಕೇವಲ ಶೀತಲ ಸಮರವಾಗಿದ್ದರೂ ಇದು ಸರ್ಕಾರ, ಸಚಿವರ ಮೇಲೆಯೂ ಪರಿ​ಣಾಮ ಬೀರುತ್ತಿದೆ.

ಸಚಿವರಿಂದ ಹಿಡಿದು ಉಪಮುಖ್ಯಮಂತ್ರಿವರೆಗೂ ಇದರ ಕಬಂಧ ಬಾಹು ಚಾಚಿದೆ. ಹೀಗಾಗಿ, ಇದು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರಿಬ್ಬರ ಜಗಳ ಸಚಿವದ್ವಯರ ನಡುವೆ ಘರ್ಷಣೆಗೆ ಕಾರಣವಾಗಿದೆ. ಹೀಗಾಗಿ, ಇವರಲ್ಲಿ ಒಬ್ಬರನ್ನು ಎತ್ತಂಗಡಿ ಮಾಡುವವರೆಗೂ ಆಟ ಮುಗಿಯುವುದಿಲ್ಲ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಹಾಗೊಂದು ವೇಳೆ ಇವರಲ್ಲಿ ಯಾರನ್ನೇ ಎತ್ತಂಗಡಿ ಮಾಡಿದರೂ ಸರ್ಕಾರವೂ ಶೇಕ್‌ ಆಗುತ್ತದೆ ಎನ್ನವಷ್ಟರ ಮಟ್ಟಿಗೆ ರಾಜಕೀಯ ಸೇರಿಕೊಂಡಿದೆ.