ಕೊಪ್ಪಳ ಜಿಲ್ಲೆಯಲ್ಲಿ ಪತಿಯನ್ನು ಕೊಲೆಗೈದ ಪತ್ನಿ ನಂತರ ನಾಗರಪಂಚಮಿ ಹಬ್ಬ ಆಚರಿಸಿದ್ದಾಳೆ. ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು ಶವವನ್ನು ಸುಟ್ಟುಹಾಕಿದ್ದಾಳೆ.

ಕೊಪ್ಪಳ: ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬೂದಗುಂಪ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ ಬಳಿಕ ಯಾವುದೇ ಪಶ್ಚಾತಾಪವಿಲ್ಲದೆ ನಾಗರಪಂಚಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾಳೆ.

ಕೊಲೆಯಾದವನನ್ನು 38 ವರ್ಷದ ದ್ಯಾಮಣ್ಣ ವಜ್ರಬಂಡಿ ಎಂದು ಗುರುತಿಸಲಾಗಿದೆ. ಈತನ ಪತ್ನಿ ನೇತ್ರಾವತಿ ತನ್ನ ಪ್ರಿಯಕರ ಸೋಮಪ್ಪನ ಸಹಾಯದಿಂದ ಜುಲೈ 25ರಂದು ದ್ಯಾಮಣ್ಣನನ್ನು ಕೊಲೆ ಮಾಡಿದ್ದಾರೆ. ದಂಪತಿ ಬೂದಗುಂಪ ಗ್ರಾಮದಲ್ಲಿ ವಾಸವಿದ್ದು, ನೇತ್ರಾವತಿಗೆ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿ ಸೋಮಪ್ಪನೊಂದಿಗೆ ಅಕ್ರಮ ಸಂಬಂಧವಿತ್ತು.

ಪತ್ನಿ ನೇತ್ರಾವತಿ ಹಾಗೂ ಸೋಮಪ್ಪ, ದ್ಯಾಮಣ್ಣ ಅವರನ್ನು ತಮ್ಮ ಜಮೀನಿನಲ್ಲಿ ಲಾರಿ ಚಕ್ರ ದುರಸ್ತಿ ನೆಪದಲ್ಲಿ ಕರೆದುಕೊಂಡು ಹೋಗಿ ಗ್ಯಾರೇಜಿನಿಂದ ತಂದ ರಾಡ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ, ಶವವನ್ನು ಐದು ಕಿಲೋಮೀಟರ್ ದೂರಕ್ಕೆ ತೆಗೆದುಕೊಂಡು ಹೋಗಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ.

ಕೊಂದ ಬಳಿಕ ಧರ್ಮಸ್ಥಳಕ್ಕೆ ಹೋಗಿದ್ದಾರೆಂದು ಕಥೆ ಕಟ್ಟಿದ ಪತ್ನಿ

ಹತ್ಯೆ ಬಳಿಕ ನೇತ್ರಾವತಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಮನೆಯಲ್ಲಿಯೇ ಇರುತ್ತಾಳೆ. ಮನೆಯವರು ದ್ಯಾಮಣ್ಣ ಬಗ್ಗೆ ಕೇಳಿದಾಗ “ಅವರು ಧರ್ಮಸ್ಥಳಕ್ಕೆ ಹೋದಿದ್ದಾರೆ” ಎಂದು ಸುಳ್ಳು ಕಥೆ ಹೆಣೆಯುತ್ತಾಳೆ. ಪ್ರೀತಿಸಿ ಮನೆ ಕಟ್ಟಿದ ಪತಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತಂಕಗೊಂಡು ಕೊನೆಗೆ ಪೊಲೀಸರನ್ನು ಸಂಪರ್ಕಿಸುತ್ತಾರೆ. ತನಿಖೆ ಆರಂಭಿಸಿದ ಪೊಲೀಸರು ಅನುಮಾನಾಸ್ಪದವಾಗಿ ನೇತ್ರಾವತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಅವಳು ಕೊನೆಗೆ ಸತ್ಯ ಒಪ್ಪಿಕೊಂಡಿದ್ದಾಳೆ.

ಪೊಲೀಸರಿಂದ ಶವ ಸಂಸ್ಕಾರ

ಶವದ ಗುರುತು ಸಿಗದ ಹಿನ್ನಲೆಯಲ್ಲಿ ಪೊಲೀಸರು ಸ್ವತಃ ಶವದ ಅಂತ್ಯಸಂಸ್ಕಾರ ನಡೆಸಿದ್ದರು. ಮನೆಯವರು ಗಂಡನನ್ನು ಕೇಳಿದ್ರೆ ಧರ್ಮಸ್ಥಳಕ್ಕೆ ಹೋಗಿದ್ದಾರೆಂದು ಕಥೆ ಕಟ್ಟಿದ್ದ ನೇತ್ರಾವತಿ. ಕೊನೆಗೆ ಅನುಮಾನ ಬಂದು ಪೊಲೀಸ್ ಠಾಣೆಗೆ ಹೋಗಿದ್ದ ಮೃತ ದ್ಯಾಮಣ್ಣನ ಸಹೋದರರು. ಆ ವೇಳೆ ಸತ್ಯ ನೇತ್ರಾವತಿ ಒಪ್ಪಿಕೊಂಡಿದ್ದಾಳೆ. ನಿಜ ಹೊರಬಿದ್ದ ನಂತರ, ದ್ಯಾಮಣ್ಣನ ಕುಟುಂಬಸ್ಥರು ಶವಕ್ಕೆ ಪುನಃ ಮಣ್ಣು ಹಾಕಿ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಈ ಸಂದರ್ಭ ದ್ಯಾಮಣ್ಣನ ಮನೆಯವರು ಗಂಭೀರ ಆಘಾತಕ್ಕೊಳಗಾಗಿದ್ದು, ಮನೆಯಲ್ಲಿ ಅಕ್ರಂದನ ಮುಗಿಲು ಮುಟ್ಟಿತು.ಈ ಪ್ರಕರಣದಲ್ಲಿ ನೇತ್ರಾವತಿ ಹಾಗೂ ಸೋಮಪ್ಪ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಮುನಿರಾಬಾದ್ ಪೊಲೀಸರು ಕ್ರಿಮಿನಲ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.