'ಕಾಂಗ್ರೆಸ್ ಇಷ್ಟವಿಲ್ಲ, ಬಿಜೆಪಿ ಸೇರೋದಕ್ಕೆ ತುದಿಗಾಲ ಮೇಲೆ ನಿಂತ 'ಕೈ' ಶಾಸಕ'
ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಬಿಜೆಪಿ ಹೊಸ್ತಿಲಲ್ಲಿ| ಹಿಟ್ನಾಳ್ ಹೇಳಿಕೆಗೆ ಕುರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಟಾಂಗ್| ಕುಷ್ಟಗಿ ಕ್ಷೇತ್ರಕ್ಕೆ ದೊಡ್ಡನಗೌಡರಿಗೆ ಟಿಕೆಟ್ ಸಿಗಲ್ಲ, ತಳ್ಳಿಕೇರಿ ಅಭ್ಯರ್ಥಿ ಎಂದಿದ್ದ ಹಿಟ್ನಾಳ್|
ಕೊಪ್ಪಳ(ಫೆ.17): ರಾಷ್ಟ್ರೋತ್ಥಾನ ಶಾಲೆಯಲ್ಲಿ ಓದಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಿಂದುತ್ವವಾದಿ. ಅವರು ಬಿಜೆಪಿಯ ಮನಸ್ಥಿತಿ ಇರುವವರು. ಈ ಹಿಂದೆ 17 ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಸೇರಿದಾಗಲೇ ಅವರೂ ಸೇರಬೇಕಾಗಿತ್ತು. ಆದರೆ, ಆಗಿಲ್ಲ. ಶೀಘ್ರದಲ್ಲಿಯೇ ಅವರು ಬಿಜೆಪಿ ಸೇರಲಿದ್ದಾರೆ ಎಂದು ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣಿ ತಳ್ಳಿಕೇರಿ ಹೇಳಿದ್ದಾರೆ.
ಕುಷ್ಟಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಈ ಬಾರಿ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡರಿಗೆ ಸಿಗುವುದಿಲ್ಲ, ಶರಣು ತಳ್ಳಿಕೇರಿಗೆ ಸಿಗುತ್ತದೆ ಎಂಬ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಹೇಳಿಕೆಗೆ ಶರಣು ನೀಡಿರುವ ಟಾಂಗ್ ಇದು.
ಕನ್ನಡಪ್ರಭದೊಂದಿಗೆ ಮಾತನಾಡಿ, ಈಗಲೂ ನಮ್ಮ ನಾಯಕರು ದೊಡ್ಡನಗೌಡ ಪಾಟೀಲ್ ಅವರೇ. ಅದರಲ್ಲಿ ಎರಡು ಮಾತಿಲ್ಲ. ವಿನಾಕಾರಣ ಈ ರೀತಿ ಹುಳಿ ಹಿಂಡುವ ಕೆಲಸವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಮಾಡಬಾರದು. ಲೈನ್‌ಮನ್ ಮಗ ಕುರಿ ಉಣ್ಣೆ ನಿಗಮದ ಅಧ್ಯಕ್ಷನಾಗಿದ್ದಾನೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಇಲ್ಲಿ ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಮಂತ್ರಿಯಾಗುತ್ತಾನೆ. ಇದೆಲ್ಲವೂ ಹಿಟ್ನಾಳ್‌ಗೆ ಗೊತ್ತಿದ್ದರೂ ಈ ರೀತಿ ಮಾತನಾಡುತ್ತಾರೆ.
ಕಾಂಗ್ರೆಸ್‌ನಲ್ಲಿ ಇದೆಲ್ಲವೂ ನಡೆಯುವುದಿಲ್ಲ. ಅವರ ಮನೆಯಲ್ಲಿಯೇ ಶಾಸಕ ಸ್ಥಾನಕ್ಕಾಗಿ ಪೈಪೋಟಿ ಇದೆ. ಅಣ್ಣ-ತಮ್ಮಂದಿರ ಮಧ್ಯೆ ಪೈಪೋಟಿ ಇದೆ. ಜೊತೆಗೆ ಅಪ್ಪ ಕೆ. ಬಸವರಾಜ ಹಿಟ್ನಾಳ ಅವರೂ ಪ್ರಯತ್ನ ನಡೆಸಿದ್ದಾರೆ. ಅವರ ಪಕ್ಷದಲ್ಲಷ್ಟೇ ಅಲ್ಲ, ಮನೆಯಲ್ಲೂ ಪೈಪೋಟಿ ಇದೆ. ಹೀಗಿದ್ದರೂ ಬಿಜೆಪಿಯಲ್ಲಿ ಹುಳಿ ಹಿಂಡುವುದು ಸರಿಯಲ್ಲ ಎಂದರು.
'ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ'
ನಾನು ಪಕ್ಷಕ್ಕೆ ದುಡಿದಿದ್ದೇನೆ. ತಾಲೂಕು ಪಂಚಾಯಿತಿ ಸದಸ್ಯನಾಗಿ, ಅಧ್ಯಕ್ಷನಾಗಿ ಸೇವೆ ಮಾಡಿದ್ದೇನೆ. ಅಷ್ಟೇ ಅಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಏನನ್ನೂ ಅಪೇಕ್ಷೆ ಮಾಡದೆ ಕೆಲಸ ಮಾಡುತ್ತಿದ್ದೇನೆ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ನಾನು ಮಾಡುತ್ತೇನೆ. ವಿನಾಕಾರಣ ಇಂಥ ಗೋಂದಲ ಸೃಷ್ಟಿಮಾಡುವ ಹೇಳಿಕೆ ನೀಡಬಾರದು. ಅವರಿಗೆ ಕಾಂಗ್ರೆಸ್ ಪಕ್ಷ ಇಷ್ಟವಿಲ್ಲ. ಬಿಜೆಪಿಗೆ ಸೇರುವುದಕ್ಕೆ ತುದಿಗಾಲ ಮೇಲೆ ನಿಂತಿದ್ದಾರೆ. ರಾಷ್ಟ್ರೋತ್ಥಾನ ಶಾಲೆಯಲ್ಲಿ ಓದಿರುವ ಅವರಿಗೆ ಬಿಜೆಪಿ ಬಗ್ಗೆ ಒಲವು ಇದೆ ಎಂದು ಕಿಚಾಯಿಸಿದ್ದಾರೆ.