Asianet Suvarna News Asianet Suvarna News

Uttara Kannada: ಭಾಷೆ, ಗಡಿ ವಿವಾದಕ್ಕೆ ಬೆಂಕಿ ಹಚ್ಚಲು ಕೊಂಕಣಿ ಭಾಷಾ ಅಭಿಮಾನಿ ಪರಿವಾರದಿಂದ ಯತ್ನ

ಗಡಿ, ಭಾಷೆ ವಿಚಾರದಲ್ಲಿ ರಾಜ್ಯದ ಬೆಳಗಾವಿ ಹಾಗೂ ಮಹಾರಾಷ್ಟ್ರದ ನಡುವೆ ಸಾಕಷ್ಟು ಸಮಯಗಳಿಂದ ವಿವಾದದ ನಡೆಯುತ್ತಿದೆ. ಇದೀಗ ಕರ್ನಾಟಕದ ಗಡಿ ಕಾರವಾರದಲ್ಲೂ ಕೊಂಕಣಿ ಭಾಷೆ ವಿಚಾರದಲ್ಲಿ ಮತ್ತೆ ಕ್ಯಾತೆ ಕಾಣಿಸಿಕೊಂಡಿದ್ದು, ಪ್ರಧಾನಿಗೆ ಪತ್ರ ಬರೆಯುವ ಮೂಲಕ ಕೊಂಕಣಿ ಭಾಷಾ ಅಭಿಮಾನಿ ಪರಿವಾರ ಸಂಘಟನೆ ಬೆಂಕಿಯ ಕಿಡಿಗೆ ಮತ್ತೆ ತುಪ್ಪ ಸುರಿಯುವ ಯತ್ನ ನಡೆಸಿದೆ.

Konkani language fans attempt to set fire to language and  border dispute in karwar gow
Author
First Published Dec 3, 2022, 10:41 PM IST

ವರದಿ: ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಡಿ.3): ಗಡಿ, ಭಾಷೆ ವಿಚಾರದಲ್ಲಿ ರಾಜ್ಯದ ಬೆಳಗಾವಿ ಹಾಗೂ ಮಹಾರಾಷ್ಟ್ರದ ನಡುವೆ ಸಾಕಷ್ಟು ಸಮಯಗಳಿಂದ ವಿವಾದದ ನಡೆಯುತ್ತಿದೆ. ಇದೀಗ ಕರ್ನಾಟಕದ ಗಡಿ ಕಾರವಾರದಲ್ಲೂ ಕೊಂಕಣಿ ಭಾಷೆ ವಿಚಾರದಲ್ಲಿ ಮತ್ತೆ ಕ್ಯಾತೆ ಕಾಣಿಸಿಕೊಂಡಿದ್ದು, ಪ್ರಧಾನಿಗೆ ಪತ್ರ ಬರೆಯುವ ಮೂಲಕ ಕೊಂಕಣಿ ಭಾಷಾ ಅಭಿಮಾನಿ ಪರಿವಾರ ಸಂಘಟನೆ ಬೆಂಕಿಯ ಕಿಡಿಗೆ ಮತ್ತೆ ತುಪ್ಪ ಸುರಿಯುವ ಯತ್ನ ನಡೆಸಿದೆ. ಇದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಬೆಳಗಾವಿ ಹಾಗೂ ಮಹಾರಾಷ್ಟ್ರ ನಡುವೆ ಗಡಿ, ಭಾಷಾ ವಿವಾದ ಮುಂದುವರಿದಿರುವಂತೆ ಕಾರವಾರದಲ್ಲೂ ಗಡಿ, ಭಾಷಾ ವಿವಾದದ ಬೆಂಕಿ ಉರಿಸಲು ಕೊಂಕಣಿ ಭಾಷಾ ಅಭಿಮಾನಿ ಪರಿವಾರ ಸಂಘಟನೆ ಪ್ರಯತ್ನಪಟ್ಟಿದೆ. ಕಾರವಾರದಲ್ಲಿ ಭಾಷಾ ವಿವಾದ ಇದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಕಾರವಾರದಲ್ಲೂ ಗಡಿ ಕ್ಯಾತೆ ತೆಗೆಯಲಾಗಿದೆ.

ಕೊಂಕಣಿ ಭಾಷಾ ಅಭಿಮಾನಿ ಪರಿವಾರ ಕಾರವಾರ ಸಂಘಟನೆಯ ಚೀಫ್ ಅಡ್ವೈಸರ್ ಹಾಗೂ ಗೋವಾ ಮೂಲದ ವಿನೋದ್  ವಿ. ಪೊವಾರ್ ಎಂಬ ವ್ಯಕ್ತಿ ಸಂಘಟನೆಯ ಹೆಸರಿನಲ್ಲಿ ಪತ್ರ ಬರೆದಿದ್ದು, ಕಾರವಾರ ಮತ್ತು ಬೆಳಗಾವಿ ವಿವಾದಿತ ಪ್ರದೇಶ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 1956ರಲ್ಲಿ ಭಾಷೆ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಮಾಡುವಾಗ ಬೆಳಗಾವಿ, ಕಾರವಾರ ವಿವಾದಿತ ಪ್ರದೇಶ ಆಗಿತ್ತು. ಈಗಲೂ ಈ ಪ್ರದೇಶದಲ್ಲಿ ಭಾಷಾ ವಿವಾದ ಇದೆ. ಬೆಳಗಾವಿ ಹಾಗೂ ಕಾರವಾರದ ಗಡಿ ವಿಚಾರ ಈಗಲೂ ಸುಪ್ರೀಂ ಕೋರ್ಟ್ ನಲ್ಲಿದೆ. ಕಾರವಾರ ನಗರಸಭೆ ಕೊಂಕಣಿಯ ಬೋರ್ಡ್ ಹಾಕಿದ್ದಾಗ ಕೆಲವು ಕಿಡಿಗೇಡಿಗಳು ಅದನ್ನು ತೆಗೆದಿದ್ದರು. ಅವರ ವಿರುದ್ಧ ಈವರೆಗೂ ಯಾವುದೇ ಕ್ರಮಗಳಾಗಿಲ್ಲ. ಸಂವಿಧಾನ ನಿಯಮದಂತೆ ಕೊಂಕಣಿ ಭಾಷೆಗೆ ಆದ್ಯತೆ ಕೊಡಬೇಕೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಆದರೆ, ಇದಕ್ಕೆ ಕಾರವಾರದ ಕೊಂಕಣಿ ಭಾಷಿಗರು ಹಾಗೂ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಕೆಲವು ಕಿಡಿಗೇಡಿಗಳು ಗೋವಾದಲ್ಲಿ ಕುಳಿತು ಇಲ್ಲಸಲ್ಲದ ಕೆಲಸ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ವಿವಾದ ಇಲ್ಲ.‌ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಯಾರೋ ಎಲ್ಲೋ ಕುಳಿತು ನಮ್ಮಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಕೆಲವು ತಿಂಗಳ ಹಿಂದೆ ಕಾರವಾರ ನಗರಸಭೆ ಅಧಿಕಾರಿಗಳು ನಡೆಸಿದ ಎಡವಟ್ಟಿನಿಂದ  ಕಾರವಾರ ನಗರದ ಬಡಾವಣೆಯ ನಾಮಫಲವನ್ನು ಕೊಂಕಣಿ ಭಾಷಿಗರಿಗಾಗಿ ದೇವನಾಗರಿ ಲಿಪಿಯಲ್ಲಿ ಬರೆಯಿಸಲಾಗಿತ್ತು. ಈ ಫಲಕ ವಿಚಾರವಾಗಿ ಕಾರವಾರದಲ್ಲಿ ವಿವಾದ ಕೂಡಾ ಉಂಟಾಗಿತ್ತು. ಕೊಂಕಣಿ ಭಾಷಿಗರಿಗಾಗಿ ದೇವನಾಗರಿ ಲಿಪಿಯಲ್ಲಿ ನಗರದ ಫಲಕ ಅಳವಡಿಕೆಯನ್ನು ನಗರಸಭೆ ಮಾಡಿದ್ದಕ್ಕೆ ನಗರಸಭೆ ವಿರುದ್ಧ ಕನ್ನಡ ಸಂಘಟನೆ  ಆಕ್ರೋಶ ವ್ಯಕ್ತಪಡಿಸಿ, ನಾಮಫಲಕಕ್ಕೆ ಬಣ್ಣ ಬಳಿಸಿದ್ದರು. ನಂತರ ಕೊಂಕಣಿ ಸಂಘಟನೆಗಳು ಕಾರವಾರದಲ್ಲಿ ಪ್ರತಿಭಟನೆ ಮಾಡಿ ಕೊಂಕಣಿ ಫಲಕ ಅಳವಡಿಸುವಂತೆ ಆಗ್ರಹಿಸಿದ್ದರು. ಕೊನೆಗೆ ನಗರಸಭೆ  ಕನ್ನಡದಲ್ಲೇ ನಾಮಫಲಕ ಅಳವಡಿಸಿ ವಿವಾದಕ್ಕೆ ತೆರೆ ಎಳೆದಿತ್ತು.

ಕೆಟ್ಟ ಮೇಲೆ ಬುದ್ಧಿ ಕಲಿತ ಮಹಾರಾಷ್ಟ್ರ ಸರ್ಕಾರ: ಗಡಿ ಗ್ರಾಮಗಳಿಗೆ ತುರ್ತು ಮೂಲಸೌಕರ್ಯ

ಆದರೆ, ಈ ವಿಷಯವನ್ನೇ ಗುರಿಯಾಗಿಟ್ಟುಕೊಂಡು ಇದೀಗ ಗೋವಾದಲ್ಲಿ ಕುಳಿತು ಪ್ರಧಾನಿಗೆ ಪತ್ರ ಬರೆದು ಭಾಷೆ, ಗಡಿ ವಿಚಾರದಲ್ಲಿ ವಿವಾದವೇ ಇಲ್ಲದೇ ಇದ್ದರೂ ವಿವಾದವನ್ನು ಸೃಷ್ಠಿಸುತ್ತಿರುವುದಕ್ಕೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ವಿವಾದ ಸೃಷ್ಠಿಸುವ ನಾಡದ್ರೋಹಿಗಳಿಗೆ ತಾಕತ್ತಿದ್ದರೆ ಗೋವಾದಲ್ಲಿ ಕನ್ನಡ ಫಲಕ ಬರೆಯಿಸಲಿ. ಜಿಲ್ಲೆಯಲ್ಲಿ ವಿವಾದ ಸೃಷ್ಠಿಸಲು ಪ್ರಯತ್ನಿಸಿದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Chikkaballapur: ಮಹಾರಾಷ್ಟ್ರದವರು ಉದ್ಧಟತನ ಬಿಡಬೇಕು: ಸಚಿವ ಸುಧಾಕರ್‌

ಒಟ್ಟಿನಲ್ಲಿ ಗಡಿ, ಭಾಷೆ ಕುರಿತು ಕಾರವಾರದಲ್ಲಿ  ವಿವಾದವಿಲ್ಲದಿದ್ದರೂ ವಿವಿಧ ಕೊಂಕಣಿ ಸಂಘಟನೆಗಳು ಮಾತ್ರ ಬೆಳಗಾವಿಯಂತೆ ಕಾರವಾರದಲ್ಲೂ ವಿವಾದ ಸೃಷ್ಠಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದರಿಂದಾಗಿ ಕನ್ನಡ ಪರ ಸಂಘಟನೆಗಳಂತೂ ಸಿಕ್ಕಾಪಟ್ಟೆ ಅಸಮಾಧಾನಕ್ಕೀಡಾಗಿದ್ದು, ಶಾಂತವಾಗಿದ್ದ ಕಾರವಾರ ಮುಂದಿನ ದಿನಗಳಲ್ಲಿ ಏನೆನಲ್ಲೆಲ್ಲಾ ಕಾಣಲಿದೆ ಎಂದು ಕಾದು ನೋಡಬೇಕಷ್ಟೇ.   

Follow Us:
Download App:
  • android
  • ios